ಮೈಸೂರು: ಪ್ರಾಮಾಣಿಕರು, ಪಾರದರ್ಶಕ ವ್ಯಕ್ತಿತ್ವ ಹೊಂದಿರುವ ಉತ್ತಮರು ವಿಧಾನಸಭೆ, ವಿಧಾನ ಪರಿಷತ್‌ಗೆ ಬೇಕಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಪ್ರಾಯಪಟ್ಟರು.
ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ 2022ನೇ ಸಾಲಿನ ವಿಧಾನ ಪರಿಷತ್‌ನ ‘ಅತ್ಯುತ್ತಮ ಶಾಸಕ’ ಪ್ರಶಸ್ತಿ ಸ್ವೀಕರಿಸಿದ ಕೆ.ಟಿ.ಶ್ರೀಕಂಠೇಗೌಡ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ವಿಧಾನ ಪರಿಷತ್ ಚಿಂತಕರ ಚಾವಡಿ. ನಾಡಿನ ಸಮಸ್ಯೆಗಳು, ಸರ್ಕಾರದ ನಿರ್ಣಯ ಕುರಿತು ಚರ್ಚೆ ಮಾಡುವ ಬುದ್ಧಿವಂತರು, ಪ್ರಜ್ಞಾವಂತರ ತಾಣ. ಇದು ಇತ್ತೀಚೆಗೆ ಬೇರೆ ರೀತಿಯಲ್ಲಿ ಪರಿವರ್ತನೆಯಾಗಿದೆ. ಸದನದ ಕಲಾಪ ನೋಡಿದಾಗ ಅಂದಿಗೂ-ಇಂದಿಗೂ ಬಹಳಷ್ಟು ವ್ಯತ್ಯಾಸವಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜಕೀಯ ವ್ಯವಸ್ಥೆ ಎಲ್ಲವನ್ನೂ ಹದಗೆಡಿಸಿದೆ. ಚುನಾವಣೆಯಲ್ಲಿ ದುಡ್ಡು ಹಂಚುವ ಉಳ್ಳವರು, ಜೂಜಾಟ ನಡೆಸುವವರು ಸೇರಿದಂತೆ ವಿವಿಧ ದಂಧೆಯಲ್ಲಿ ಹಣ ಮಾಡಿದವರು ಆಯ್ಕೆಯಾಗಿ ಬರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಉತ್ತಮ ಸಂಸದೀಯಪಟುಗಳ ಕೊರತೆ ಎದುರಾಗಲಿದೆ ಎಂದರು.
ಜನರೂ ಲೂಟಿಕೋರರು ಮತ್ತು ಪ್ರಾಮಾಣಿಕರನ್ನು ಒಂದೇ ರೀತಿಯಲ್ಲೇ ನೋಡುತ್ತಾರೆ. ಇದು ಕೆಟ್ಟ ವ್ಯವಸ್ಥೆಗೆ ಇನ್ನಷ್ಟು ಉತ್ತೇಜನ ನೀಡುತ್ತಿದೆ. ಅಕ್ರಮವಾಗಿ ಹಣ ಸಂಪಾದಿಸಿದವರು ಜನರ ಕಷ್ಟ-ನಷ್ಟವನ್ನು ಕೇಳುತ್ತಾರೆಯೇ ಎಂದು ಪ್ರಶ್ನಿಸಿದರು.
ಶೇ.40 ಕಮಿಷನ್ ಇದೆ ಎಂದು ಆರೋಪಿಸಿದ್ದ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷರು ಇದೀಗ ಶೇ.20 ಮಾತ್ರ ತೆಗೆದುಕೊಳ್ಳುವಂತೆ ಸರ್ಕಾರಕ್ಕೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಹೀಗಿದ್ದಾಗ ಪ್ರಾಮಾಣಿಕ ಪ್ರತಿನಿಧಿಗಳು ಜನರಿಂದ ಆಯ್ಕೆಯಾಗುವುದು ಸಾಧ್ಯವೇ ಎಂದು ಪ್ರಶ್ನಿಸಿದರು.
ಈಗಿನ ಚುನಾವಣೆ ರಾಜಕೀಯದಲ್ಲಿ ಉತ್ತಮರು ಆಯ್ಕೆ ಆಗುವುದು ಸಾಧ್ಯವೇ? ಹೀಗಾದರೆ, ಸದನದಲ್ಲಿ ಶಿಕ್ಷಣ, ಆರೋಗ್ಯ ಸಮಸ್ಯೆಗಳ ಕುರಿತು ಚರ್ಚಿಸುವವರು ಯಾರು? ಮುಂದಿನ ನಾಡಿನ ಸ್ಥಿತಿ ಏನಾಗಲಿದೆ? ರಾಜಕಾರಣಿಗಳಿಂದ ಈ ರೀತಿಯ ತಪ್ಪು ಆಗಿದೆ ಎಂಬುದು ನಿಜ. ಆದರೆ, ಇದನ್ನು ಸರಿಪಡಿಸುವವರು ಯಾರು? ಅಂತಿಮವಾಗಿ ಜನರೇ ಉತ್ತಮರನ್ನು ಆಯ್ಕೆ ಮಾಡುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಜನರಿಗೂ ಉತ್ತಮ ಸಂಸದೀಯ ಪಟು ಬೇಕಿಲ್ಲ. ಅವರು ಕರೆದಾಗ ಮದುವೆ, ದೇವಸ್ಥಾನದಂತಹ ಬೇರೆ ಬೇರೆ ಕಾರ್ಯಕ್ರಮಕ್ಕೆ ಹೋಗಬೇಕು. ಇಲ್ಲದಿದ್ದರೆ ಮುನಿಸಿಕೊಳ್ಳುತ್ತಾರೆ. ‘ಅಂದು ಬರಲಿಲ್ಲ, ಈಗ ವೋಟ್ ಕೇಳಲು ಬಂದಿದ್ದಾನೆ’ ಎಂದು ಕಿಡಿಕಾರುತ್ತಾರೆ. ಹೀಗಾದರೆ, ಸಮಾಜದ ಆಗುಹೋಗುಗಳು, ಸರ್ಕಾರದ ನಿರ್ಣಯಗಳು, ಸಮಸ್ಯೆಗಳ ಕುರಿತು ಅಧ್ಯಯನ ಮಾಡಲು ಶಾಸಕರಿಗೆ ಅವಕಾಶ ಎಲ್ಲಿ ಸಿಗುತ್ತದೆ ಎಂದು ಪ್ರಶ್ನಿಸಿದರು.
ಸದನದಲ್ಲೂ ಮ್ಯಾಚ್ ಫಿಕ್ಸಿಂಗ್:
ಸದನದಲ್ಲೂ ಮ್ಯಾಚ್ ಫಿಕ್ಸಿಂಗ್ ನಡೆಯುತ್ತದೆ. ಹೀಗಾಗಿ, ಎರಡು ಸದನದಲ್ಲೂ ವಿಷಯಗಳ ಚರ್ಚೆಗೆ ಅವಕಾಶವೇ ದೊರೆಯುತ್ತಿಲ್ಲ. ಮುಖ್ಯ ವಿಷಯದ ಕುರಿತು ಚರ್ಚೆ ಮಾಡುವ ಸಂದರ್ಭದಲ್ಲಿ ಉದ್ದೇಶಪೂರ್ವಕವಾಗಿ ವಿಷಯಾಂತರ ಮಾಡಲಾಗುತ್ತದೆ. ಈ ಮೂಲಕ ನಿಜಾಂಶ, ಸತ್ಯ ಹೊರ ಬಾರದಂತೆ ತಡೆಯಲಾಗುತ್ತದೆ. ಈ ರೀತಿಯ ಹೊಂದಾಣಿಕೆ ರಾಜಕಾರಣ ನಡೆಯುತ್ತಿದೆ ಎಂದರು.
ಅರ್ಜಿ ಹಿಡಿದು ನಿಂತಿದ್ದಾರೆ:
ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕೆ.ಟಿ.ಶ್ರೀಕಂಠೇಗೌಡ ಅವರನ್ನು ಕಣಕ್ಕೆ ಇಳಿಸುವ ಕುರಿತು ಪಕ್ಷ ತೀರ್ಮಾನ ಮಾಡಲಿದೆ. ಶಿಕ್ಷಕರೂ ಉತ್ತಮರನ್ನು ಆಯ್ಕೆ ಮಾಡಲು ಮನಸ್ಸು ಮಾಡಬೇಕು. ಆದರೆ, ನಮ್ಮ ಪಕ್ಷದಿಂದ ಹೊರ ಹೋಗಿರುವ ಸ್ಪರ್ಧಾ ಆಕಾಂಕ್ಷಿಯೊಬ್ಬರು ಬೇರೆ ಪಕ್ಷದಲ್ಲಿ ಅರ್ಜಿ ಹಿಡಿದುಕೊಂಡು ನಿಂತಿದ್ದಾರೆ ಎಂದು ಪರೋಕ್ಷವಾಗಿ ಮರಿತಿಬ್ಬೇಗೌಡ ವಿರುದ್ಧ ಕಿಡಿಕಾರಿದರು.
ತಾತ್ಕಾಲಿಕ ಆಸೆಗೆ ಮರಳು:
ಜನರೂ ಸರ್ಕಾರದಿಂದ ಉಚಿತ ಸವಲತ್ತು ಸಿಗುವುದನ್ನೇ ಬಯಸುತ್ತಾರೆ. ತಾತ್ಕಾಲಿಕ ಆಸೆಗೆ ಮತದಾರರು ಮರಳಾಗುತ್ತಿದ್ದಾರೆ. ಹೀಗಾದರೆ, ಶಾಶ್ವತ ಕಾರ್ಯಕ್ರಮ, ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ನೆರವು ನೀಡುವಂತಹ ಸರ್ಕಾರ ಬರಲು ಸಾಧ್ಯವೇ? ರಾಜ್ಯದ ಸಾಲವು 5.65 ಲಕ್ಷ ಕೋಟಿ ರೂ. ದಾಟಿದೆ. ಗ್ಯಾರಂಟಿ ಹಾಗೂ ಇತರ ಕಾರ್ಯಕ್ರಮಗಳಿಗೆ ಸರ್ಕಾರ ಹೆಚ್ಚುವರಿ 85 ಸಾವಿರ ಕೋಟಿ ರೂ. ಸಾಲ ಮಾಡುತ್ತಿದೆ. ಜನರ ಮೇಲೆ ಸಾಲದ ಹೊರೆ ಹೆಚ್ಚಾಗುತ್ತಿದೆ, ಈ ಬಗ್ಗೆ ಯಾರೂ ಯೋಚಿಸುತ್ತಿಲ್ಲ ಎಂದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ತನ್ವೀರ್‌ಸೇಠ್, ಜಿ.ಟಿ.ದೇವೇಗೌಡ, ವಿಧಾನ ಪರಿಷತ್ ಸದಸ್ಯರಾದ ಡಾ.ಡಿ.ತಿಮ್ಮಯ್ಯ, ಸಿ.ಎನ್.ಮಂಜೇಗೌಡ ಮತ್ತಿತರರಿದ್ದರು.