ಜಿಲ್ಲೆ

ಸತ್ಯಶುದ್ಧ ಕಾಯಕ, ಸರಳ ಜೀವನ ರೂಢಿಸಿಕೊಳ್ಳಿ

ಚಿತ್ರದುರ್ಗ: ಗಂಡ-ಹೆಂಡತಿಯರು ಜ್ಞಾನದ ಜ್ಯೋತಿಯಾಗಿ ಬೆಳಗಬೇಕು. ಅದಕ್ಕೆ ಪ್ರೀತಿಯೆಂಬ ತೈಲವನ್ನು ಹಾಕಿದರೆ ಮಾತ್ರ ಬೆಳಕು ಚೆಲ್ಲುತ್ತದೆ ಎಂದು ಗುರುಕುಲದ ಶ್ರೀ ಬಸವ ಮುರುೇಂದ್ರ ಸ್ವಾಮೀಜಿ ಹೇಳಿದರು.

ನಗರದ ಮುರುಘಾಮಠದಲ್ಲಿ ಆಯೋಜಿಸಿದ್ದ 35ನೇ ವರ್ಷದ ಹತ್ತನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದಲ್ಲಿ 6 ಜೋಡಿಗಳ ವಿವಾಹ ನೆರವೇರಿಸಿ ಮಾತನಾಡಿದರು.

ಮದುವೆ ಎಂಬುದು ಕೇವಲ ವ್ಯವಹಾರವಲ್ಲ. ಎರಡು ಸಂಬಂಧಗಳನ್ನು ಒಟ್ಟುಗೂಡಿಸುವುದಾಗಿದೆ. ಬಸವಣ್ಣ ಹೇಳುವಂತೆ ಸತಿಪತಿ ಒಂದಾಗಿ ನಡೆದರೆ ಸಂಸ್ಕಾರವಂತರನ್ನಾಗಿ ಮಾಡುತ್ತದೆ ಎಂದರು.

ಬಡವರು ಮದುವೆ ಮಾಡುವುದು ಕಷ್ಟವಿರುವ ಕಾಲವಿದು. ಹಾಗಾಗಿ ಇಂಥವರಿಗೆ ಮಠವು ಸಾಮೂಹಿಕ ಕಲ್ಯಾಣದ ಮೂಲಕ ನೆರವಾಗಿದೆ. ಶ್ರೀ ಮಠದಲ್ಲಿ 30 ಸಾವಿರಕ್ಕೂ ಹೆಚ್ಚು ಸರಳ ವಿವಾಹಗಳು ನೆರವೇರಿವೆ ಎಂದು ತಿಳಿಸಿದರು.

ವಧು ವರರು ತಂದೆ-ತಾಯಿಗಳನ್ನು ದೇವರೆಂದೇ ಭಾವಿಸಬೇಕು. ಬಸವಾದಿ ಶರಣರ ಆಶಯದಂತೆ ಸತ್ಯಶುದ್ಧ ಕಾಯಕ ಮಾಡುತ್ತ ಸರಳವಾದ ಜೀವನ ನಡೆಸಬೇಕು. ಕಾಯಕದಲ್ಲಿ ನೆಮ್ಮದಿ ಕಾಣಬೇಕು ಎಂದು ತಿಳಿಸಿದರು.

ಮರ್ಯಾದೆ, ಮಾತಿಗೆ ಅಂಜಿ ಕೆಲವರು ಸಾಲ ಮಾಡಿ ಮದುವೆ ಮಾಡಿ ಬದುಕನ್ನು ಸಾಲದ ಕೂಪಕ್ಕೆ ಈಡುಮಾಡುತ್ತಾರೆ. ಸರಳ ಜೀವನ ನಿಮ್ಮದಾಗಲಿ ಎಂದು ಹರಸಿದರು.

ಸರ್ದಾರ್ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ಮದುವೆ ಎಂದರೆ ಗಲಾಟೆ, ಗದ್ದಲ, ಆಡಂಬರ, ದುಂದುವೆಚ್ಚ, ವೈಭವ ನೋಡುತ್ತೇವೆ. ಆದರೆ, ಮುರುಘಾ ಮಠದಲ್ಲಿ ನಡೆಯುವ ಸಾಮೂಹಿಕ ಕಲ್ಯಾಣ ಮಹೋತ್ಸವ ಸರಳವಾಗಿ ಜಾತಿ, ವರ್ಣ, ವರ್ಗ ಭೇದ ರಹಿತವಾಗಿ ನೆರವೇರುತ್ತಿರುವುದು ಬಡವರಿಗೆ ಅನುಕೂಲವಾಗಿದೆ ಎಂದು ತಿಳಿಸಿದರು.

ಇಲ್ಲಿ ಮದುವೆ ಮಾಡುವುದರೊಂದಿಗೆ ಸತಿ ಪತಿಗಳಾದವರು ದಾಂಪತ್ಯ ಜೀವನವನ್ನು ಮೌಲ್ಯಗಳೊಂದಿಗೆ ನಡೆಸಬೇಕು ಎಂದು ತಿಳಿಸಿದರು.

ನಿಪ್ಪಾಣಿಯ ಬಸವ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಮುರುಘಾ ಮಠವು ನಾಡಿನಲ್ಲಿ ತ್ರಿವಿಧ ದಾಸೋಹಕ್ಕೆ ಹೆಸರು ವಾಸಿಯಾಗಿದೆ. ಮಠದಲ್ಲಿ ಅನ್ನ, ಜ್ಞಾನ ದಾಸೋಹ ನೀಡುತ್ತಿದೆ. ಈ ಕಾರ್ಯಕ್ರಮದಲ್ಲಿ ವಿವಾಹವಾಗುತ್ತಿರುವ ನವಜೋಡಿಗಳ ಜೀವನ ಸುಖಕರವಾಗಿರಲಿ. ಅವರ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ಕೊಡಲಿ ಎಂದರು.

ಇದೇ ವೇಳೆ ದಾವಣಗೆರೆ ರಂಗಭೂಮಿ ಕಲಾವಿದೆ ಜಿ. ಉಮಾಶ್ರೀ ಅವರನ್ನು ಸನ್ಮಾನಿಸಲಾಯಿತು. ಜಮುರಾ ಕಲಾವಿದರು ಪ್ರಾರ್ಥಿಸಿದರು. ಗಿರೀಶಾಚಾರ್ ಸ್ವಾಗತಿಸಿದರು. ನಿವೃತ್ತ ಪ್ರಾಚಾರ್ಯ ಟಿ.ಪಿ. ಜ್ಞಾನಮೂರ್ತಿ ನಿರೂಪಿಸಿದರು.