ಜಿಲ್ಲೆ

ಸತ್ಯಯುಗಕ್ಕೆ ಸದ್ಭಾವದಿಂದ ಸಿದ್ಧರಾಗಿರೋಣ

ಕಲಬುರಗಿ: ಎಲ್ಲ ಯುಗಗಳು ಪೂರ್ಣಗೊಂಡಿದ್ದು, ಇದೀಗ ಕಲಿಯುಗ ನಡೆಯುತ್ತಿದ್ದು, ನಾವೆಲ್ಲರೂ ಸನ್ಮಾರ್ಗದಲ್ಲಿ ಸಾಗಬೇಕು. ಸತ್ಯ ಸುಳ್ಳನ್ನು ಅರಿಯುವ ಶಕ್ತಿ ನಮ್ಮೆಲ್ಲರಲ್ಲೂ ಬರಬೇಕು. ಭವಿಷ್ಯದಲ್ಲಿ ಸತ್ಯಯುಗಕ್ಕೆ ನಾವೆಲ್ಲರೂ ಪ್ರವೇಶಿಸಲು ಸದ್ಭಾವದಿಂದ ಸಿದ್ಧರಾಗೋಣ ಎಂದು ಲಂಡನ್‌ನ ರಾಜಯೋಗಿನಿ ಬಿ.ಕೆ.ಜಯಂತಿ ದಿದಿ ನುಡಿದರು.

ನಗರದ ಹೊರವಲಯದ ಅಮೃತ ಸರೋವರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಿಟ್ರೀಟ್ ಸೆಂಟರ್‌ನಲ್ಲಿ ಭಾನುವಾರ ಏರ್ಪಡಿಸಿದ್ದ ವಿಶೇಷ ಪ್ರವಚನದಲ್ಲಿ `ಮನಸ್ಸಿನ ಅದ್ಭುತ ಗುಟ್ಟುಗಳು' ಕುರಿತು ಮಾತನಾಡಿದ ಅವರು, ಶಾಂತಿ, ಸುಖದ ಜೀವನ ನಡೆಸುವುದೇ ಸತ್ಯಯುಗಕ್ಕೆ ನಡೆಸುವ ಸಿದ್ಧತೆ. ಸಂಬAಧಗಳನ್ನು ಕಾಪಾಡಿ, ಪ್ರಕೃತಿಯೊಂದಿಗೆ ಜೀವನ ಸಾಗಿಸಬೇಕು. ಸೃಷ್ಟಿಯ ಸತ್ಯವು ಸಾರ್ವಕಾಲಿಕವಾಗಿದ್ದು, ಅದನ್ನು ಅರಿಯಬೇಕು ಎಂದರು.

ದೆಹಲಿಯ ಖ್ಯಾತ ರೆಡಿಯಾಲಜಿಸ್ಟ್ ರಾಜಯೋಗಿ ಡಾ.ಮೋಹಿತ್ ಗುಪ್ತಾ ಜಾಗೃತ ಭವಿಷ್ಯದ ನಿರ್ಮಾಣ ಕುರಿತು ಉಪನ್ಯಾಸ ನೀಡಿ, ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಅದನ್ನು ಬಗೆಹರಿಸುವ ಶಕ್ತಿ ಹೊರಗಡೆ ಎಲ್ಲೂ ಇಲ್ಲ. ಅದು ನಮ್ಮ ಸಂಕಲ್ಪದಲ್ಲಿಯೇ ಇದೆ. ನಮ್ಮ ಸಂಕಲ್ಪದಂತೆ ಕೃತಿ, ಮಾತು, ಕಾರ್ಯ ನೆರವೇರುತ್ತವೆ. ಅಸಂಭವವನ್ನು ಸಾಧ್ಯ ಮಾಡುವ ಶಕ್ತಿ ನಮಗೆ ಅರಿವು ಇಲ್ಲದಂತೆ ನಮ್ಮಲ್ಲಿ ಅಡಕವಾಗಿ ಇರುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ.ಪಾಟೀಲ್ ಮಾತನಾಡಿದರು. ರಾಜಯೋಗಿನಿ ಬಿ.ಕೆ.ವಿಜಯಾ ದಿದಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ಸಿವಿಲ್ ಪ್ರಧಾನ ನ್ಯಾಯಾಧೀಶೆ ಎಸ್.ಎನ್.ನಾಗಶ್ರೀ, ಮೌಂಟ್ ಅಬು ಬ್ರಹ್ಮಕುಮಾರಿ ಸಮಾಜ ಸೇವಾ ಪ್ರಖಂಡದ ಉಪಾಧ್ಯಕ್ಷ ಡಾ.ಬಿ.ಕೆ.ಪ್ರೇಮ, ಡಾ.ಮಂಜುನಾಥ ಇದ್ದರು.