ಹಾಸನ: ನಗರದ ಹೊರವಲಯದ ಸತ್ಯಮಂಗಲ ಬಡಾವಣೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಅವರು ಶುಕ್ರವಾರ ನಮ್ಮ ಕ್ಲಿನಿಕ್‌ಗೆ ಚಾಲನೆ ನೀಡಿದರು.
ಕ್ಲಿನಿಕ್‌ನಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಆವರಣದಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಿದ ಅವರು, ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳ ಸಮ್ಮುಖದಲ್ಲಿ ಕ್ಲಿನಿಕ್‌ಗೆ ಚಾಲನೆ ನೀಡಿದ ಶಾಸಕ ಸ್ವರೂಪ್ ಪ್ರಕಾಶ್ ಅವರಿಗೆ ಗ್ರಾಮಸ್ಥರು ಪ್ರೀತಿಪೂರ್ವಕವಾಗಿ ಸನ್ಮಾನಿಸಿ ಗೌರವಿಸಿದರು.
ಬಳಿಕ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಹಾಸನ ನಗರಸಭೆ ನಗರಪಾಲಿಕೆಯಾಗಿ ಬೆಳೆಯುತ್ತಿದೆ. ಪ್ರಸ್ತುತ ಸಂದರ್ಭದಲ್ಲಿ ಹೆಚ್ಚಿನ ಮೂಲಭೂತ ಸೌಕರ್ಯಗಳಿಗೆ ಸರ್ಕಾರಕ್ಕೆ ಮನವಿ ಮಾಡಿದ ಹಿನ್ನಲೆಯಲ್ಲಿ ಹಲವು ಕಾರ್ಯಕ್ರಮಗಳನ್ನು ಹಾಸನಕ್ಕೆ ತರಲಾಗುತ್ತಿದೆ ಎಂದರು.
ಅದರಂತೆ ಸತ್ಯಮಂಗಲಕ್ಕೆ ಹೇಮಾವತಿ ನದಿಯಿಂದ ಕುಡಿಯುವ ನೀರು ಒದಗಿಸುವ ಬಹುಮುಖ್ಯ ಕೆಲಸಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ. ಈಗಾಗಲೇ ಕಾಮಗಾರಿಯು ಮುಗಿಯುವ ಹಂತದಲ್ಲಿದೆ. ಅಲ್ಲದೆ ಮನುಷ್ಯನ ಆರೋಗ್ಯಕ್ಕೆ ಶುದ್ಧ ಕುಡಿಯುವ ನೀರು ಬಹಳ ಮುಖ್ಯ. ಇದನ್ನು ಮನಗಂಡು ಅವರ ಆರೋಗ್ಯ ರಕ್ಷಣೆಗಾಗಿ ನಮ್ಮ ಕ್ಲಿನಿಕ್ ತೆರೆಯಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಆಸ್ಪತ್ರೆಗೆ ಅಗತ್ಯ ಇರುವ ವೈದ್ಯಕೀಯ ಸಿಬ್ಬಂದಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಿನ ಅನುದಾನ ತಂದು ಬಡಾವಣೆಯ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವ ನಿಟ್ಟಿನಲ್ಲಿ ಶ್ರಮ ವಹಿಸಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.
ಈ ವೇಳೆ ನಗರಸಭೆ ಅಧ್ಯಕ್ಷ ಎಂ.ಚಂದ್ರೇಗೌಡ, ಸದಸ್ಯ ವಾಸುದೇವ್ ಹಾಗೂ ಗ್ರಾಮದ ಮುಖಂಡರು ಹಾಗೂ ಅಧಿಕಾರಿಗಳು, ಸಿಬ್ಬಂದಿ ಇದ್ದರು.