ಮದ್ದೂರು: ಎಲ್ಲ ಧರ್ಮಗಳ ಸಾರ ಸತ್ಯ. ಸತ್ಯಾನ್ವೇಷಣೆ ಹಾಗೂ ಸತ್ಯ ಮಾರ್ಗದಲ್ಲಿ ನಡೆಯುವುದೇ ಆಗಿದೆ ಎಂದು ಕೊಪ್ಪ ಯಂಬಾರ್ಜಿಯರ್ ಮಠದ ಅಧ್ಯಕ್ಷ ಡಾ.ಕುಮಾರ ಕೊಪ್ಪ ಅಭಿಪ್ರಾಯಪಟ್ಟರು.
ತಾಲೂಕಿನ ಕೊಪ್ಪ ಗ್ರಾಮದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಅವರು ಮಾತನಾಡಿದರು.
ತಂದೆ, ತಾಯಿಯೇ ನಿಜವಾದ ದೇವರು. ಪ್ರತಿಯೊಬ್ಬರೂ ಭಾವೈಕ್ಯತೆ, ಪ್ರೀತಿ ಮತ್ತು ಆತ್ಮೀಯತೆ ಹಾಗೂ ವಿಶ್ವಾಸದಿಂದ ಬಾಳುವುದೇ ನಿಜವಾದ ಧರ್ಮವಾಗಿದೆ. ದೇವನೊಬ್ಬ ನಾಮ ಹಲವು ಎಂಬಂತೆ ಎಲ್ಲ ಧರ್ಮಗಳು ಸತ್ಯದ ಹಾದಿಯನ್ನು ತಿಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ ಎಂದರು.
ಧರ್ಮದ ಬೆಳವಣಿಗೆಗೆ, ಪ್ರವರ್ಧಮಾನ ಹಾಗೂ ಪ್ರಚಾರಕ್ಕಾಗಿ ಒಬ್ಬ ವ್ಯಕ್ತಿಯನ್ನು ಕೊಲ್ಲುವುದು ಧರ್ಮವಲ್ಲ ಎಂಬ ಅಬ್ದುಲ್ ಕಲಾಂ ಅವರ ಮಾತನ್ನು ನಾವು ಮನನ ಮಾಡಿಕೊಳ್ಳಬೇಕು. ಯಾವ ಧರ್ಮದಲ್ಲಿ ಹಸಿವು, ಅಸಮಾನತೆ, ಅಸ್ಪಶ್ಯತೆ, ವೌಢ್ಯತೆ ಇರುವುದೋ ಅದು ಧರ್ಮವಲ್ಲ ಎಂಬುದನ್ನು 1893ರಲ್ಲಿ ಅಮೆರಿಕದ ಶಿಕಾಗೋದಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಸಾರಿ ಹೇಳಿದ್ದರು. ಅವನ್ನು ನಾವು ನೆನಪು ಮಾಡಿಕೊಂಡರೆ ಧರ್ಮವನ್ನು ಪ್ರವರ್ಧಮಾನಕ್ಕೆ ಬೆಳೆಸಿ, ಜನಮಾನಸಕ್ಕೆ ಕೊಂಡೊಯ್ಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು.
ಬೇಲಿ ಮಠದ ಶ್ರೀಶಿವಾನುಭವ ಚರಮೂರ್ತಿ ಶಿವರುದ್ರ ಸ್ವಾಮೀಜಿ, ಕ್ರೈಸ್ತ ಧರ್ಮಗುರು ಡಾ.ಲಾರ್ಡ್ ಪ್ರಸಾದ್, ಸಿಖ್ ಧರ್ಮಗುರು ಹರ್ಬಜನ್ ಸಿಂಗ್, ಕೊಪ್ಪ ಗ್ರಾಪಂ ಅಧ್ಯಕ್ಷ ಕೆ.ಎಸ್.ನವೀನ್‌ಕುಮಾರ್, ಸದಸ್ಯ ಕೆ.ಎಂ.ಪರ್ವೀಜ್ ಅಹಮ್ಮದ್, ಅರ್ಚಕ ಶ್ರೀನಿವಾಸ್, ಕ್ರಿಸ್ಟೋರ್ ಮಾಥ್ಯೂ, ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಈಶ್ವರಿ, ರಾಘವೇಂದ್ರ, ಸಿಲ್ಕಾವತಿ ಮತ್ತಿತರರು ಉಪಸ್ಥಿತರಿದ್ದರು.