ಹುಣಸೂರು: ಸಮಾಜದ ಒಳಿತಿಗಾಗಿ ಸತ್ಯವನ್ನು ನುಡಿಯುವ ಮೂಲಕ ಜಗದ ಕವಿ ಕುವೆಂಪು ಅವರಿಗೆ ಗೌರವ ಸಲ್ಲಿಸಿ ಎಂದು ಪಿರಿಯಾಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಿ.ಅಂಬಿಕಾ ಸಲಹೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್, ರೋಟರಿ ಸಂಸ್ಥೆ ಸಹಯೋಗದಲ್ಲಿ ರೋಟರಿ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪು ಜನ್ಮ ದಿನಾಚರಣೆ ಅಂಗವಾಗಿ ಕುವೆಂಪು ಗೀತೆಗಳ ಗಾಯನ ಹಾಗೂ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವಮಾನವ ಪ್ರಜ್ಞೆ ಸಂದೇಶ ನೀಡಿದ ಕುವೆಂಪು ಅವರು, ನುಡಿದಂತೆ ಬರೆದರು, ಬರೆದಂತೆ ಬದುಕಿದರು. ಸಮಾಜದ ಅಂಕುಡೊಂಕುಗಳನ್ನು ನಿರ್ಭಯವಾಗಿ ತಮ್ಮ ಸಾಹಿತ್ಯ ಕೃಷಿಯಲ್ಲಿ ಪ್ರಸ್ತಾಪಿಸಿ, ಯಾವುದೇ ಧರ್ಮ, ಜಾತಿ, ಆಚರಣೆಗಳು ಏನೇ ಹೇಳಿದರೂ ನಮ್ಮ ಮನಸು ಮುಖ್ಯವಾದುದು. ಪ್ರತಿ ಮಗುವು ವಿಶ್ವಮಾನವನಾಗಬೇಕೆಂದ ಕುವೆಂಪು ಅವರು ಕನ್ನಡ ಸಾಹಿತ್ಯ ಪ್ರಪಂಚದಲ್ಲಿ ಅಜರಾಮರ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿ, ಕುವೆಂಪು ಸಾಹಿತ್ಯವಿಲ್ಲದೆ ಕನ್ನಡ ಸಾಹಿತ್ಯ ಓದಲಾಗುವುದಿಲ್ಲ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲೂ ತಮ್ಮ ಛಾಪು ಮೂಡಿಸಿದ್ದ ಕುವೆಂಪು ಅವರಿಗೆ ನೊಬೆಲ್ ಪ್ರಶಸ್ತಿ ಸಲ್ಲಬೇಕಿತ್ತು ಎಂದು ಅಭಿಪ್ರಾಯಪಟ್ಟರು.
ರೋಟರಿ ವಿದ್ಯಾಸಂಸ್ಥೆಯ ಚೇರ್ಮನ್ ಡಾ.ವೃಷಭೇಂದ್ರಸ್ವಾಮಿ ಸಮಾರಂಭ ಉದ್ಘಾಟಿಸಿದರು. ತಾಲೂಕು ಕಸಾಪ ಅಧ್ಯಕ್ಷ ಎಚ್.ಕೆ.ಮಹದೇವ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಕುಮಾರ್ ಅರಸೇಗೌಡ, ಜ.ಹೆ.ಮಹದೇವ್ ಕಲ್ಕುಣಿಕೆ, ಡಾ.ಕೆ.ಮಾದುಪ್ರಸಾದ್, ಎಂ.ರವಿ ಅವರನ್ನು ಸನ್ಮಾನಿಸಲಾಯಿತು.
ಡಾ.ಪಿ.ಎಸ್.ಲೋಹಿತ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಗೋವಿಂದೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ, ಕಸಾಪ ಗೌರವ ಕಾರ್ಯದರ್ಶಿ ಟಿ.ಲೋಕೇಶ್, ಪ್ರಸನ್ನಕುಮಾರ್, ಕೆ.ನಂಜುಂಡಸ್ವಾಮಿ, ಪತ್ರಕರ್ತರ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ಇತರರು ಇದ್ದರು.