ಜಿಲ್ಲೆ

ಸತ್ಪ್ರಜೆಗಳನ್ನು ರೂಪಿಸುವ ಗುರುತರ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ : ಸಚಿವ ಬಿ.ಸಿ.ನಾಗೇಶ್

reportermys

ಅರಸೀಕೆರೆ : ಸತ್ಪ್ರಜೆಗಳನ್ನು ರೂಪಿಸುವ ಗುರುತರ ಹೊಣೆಗಾರಿಕೆ ಶಿಕ್ಷಕ ಸಮುದಾಯದ ಮೇಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದರು.

ಶ್ರೀನಿವಾಸ ನಗರ ಬಡಾವಣೆಯಲ್ಲಿ ನಿರ್ಮಿಸಿರುವ ಸೇವಾ ಸಂಕಲ್ಪ ಶಾಲೆಯ ನೂತನ ಕಟ್ಟಡ ಲೋಕರ್ಪಣೆಗೊಳಿಸಿ ಮಾತನಾಡಿದರು.

ಶಿಕ್ಷಣ ಸಂಸ್ಕಾರ ಕಲಿಸುವ ಪ್ರಮುಖ ಅಸ್ತ್ರವಾಗಿದೆ ಎಂಬುದನ್ನು ಮರೆಯಬಾರದು.ಸಮಾಜ ಹಾಗೂ ನಾಡಿಗೆ ಉತ್ತಮ ಚಾರಿತ್ರ್ಯವುಳ್ಳ ವ್ಯಕ್ತಿಗಳನ್ನು ನೀಡುವುದು ಧ್ಯೇಯವಾಗಬೇಕು. ಬದಲಾದ ವಿದ್ಯಮಾನದಲ್ಲಿ ಜನರು ಇಂಗ್ಲೀಷ್ ಶಿಕ್ಷಣದತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ.ಇದನ್ನು ಮನಗಂಡಿರುವ ಸರ್ಕಾರ ಗ್ರಾಮೀಣ ಭಾಗದಲ್ಲಿ ಕೆಪಿಎಸ್ ಶಾಲೆಗಳನ್ನು ತೆರೆದು ಆಂಗ್ಲಭಾಷೆ ಕಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ.ಆದರೆ ನಿರೀಕ್ಷಿತ ಮಟ್ಟದ ಬೋಧನಾ ಕಾರ್ಯ ನಡೆಯುತ್ತಿಲ್ಲ, ಮಕ್ಕಳಿಗೆ ತಲುಪುತ್ತಿಲ್ಲ ಎನ್ನುವ ದೂರುಗಳು ಕೇಳಿ ಬಂದಿದ್ದು ಶಿಕ್ಷಕರು ಇತ್ತ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಪೂರ್ಣಗೊಂಡರೂ ಬ್ರಿಟೀಷ್ ಶಿಕ್ಷಣ ವ್ಯವಸ್ಥೆಯ ನೀತಿ, ನಿಯಾಮವಳಿಗಳನ್ನು ಬದಲಾಗದಿರುವುದು ದುರದೃಷ್ಟಕರ ಸಂಗತಿಯಾಗಿದೆ.ನಮ್ಮ ಸಂಸ್ಕೃತಿ, ಆಚಾರ, ವಿಚಾರ, ಸುಖ,ದುಃಖಗಳನ್ನು ಹಂಚಿಕೊಳ್ಳಲು, ಭಾವನೆಗಳನ್ನು ಬೆಸೆಯಲು ಮಾತೃ ಭಾಷೆ ಅವಶ್ಯಕ ಎಂಬುದನ್ನು ಎಂದಿಗೂ ಮರೆಯಬಾರದು.ದೇಶದ ಪರಂಪರೆ, ಇತಿಹಾಸವನ್ನು ಮರುಕಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಅವಶ್ಯವಿರುವ ಎಲ್ಲರೀತಿಯ ಜೀವನಾವಶ್ಯಕ ಕಲಿಕಾ ಕ್ರಮಗಳನ್ನು ಕನಿಷ್ಠ ಶುಲ್ಕ ಪಡೆದು ಸೇವಾ ಸಂಕಲ್ಪ ಶಾಲೆ ಮುಂದುವರೆಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಬಣ್ಣಿಸಿದರು.

ರಾಜ್ಯ ರಸ್ತೆ ಸಾರಿಗೆ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಜಿವಿಟಿ ಬಸವರಾಜ್ ಮಾತನಾಡಿ, ಸಂಘ ಪರಿವಾರದ ಮುಖಂಡರು ಉದ್ದಾತ್ತ ಚಿಂತನೆಯೊಂದಿಗೆ ತೆರೆದಿರುವ ಶಾಲೆಗೆ ಯಶಸ್ಸು ದೊರೆಯಲಿ ಎಂದರು.ನಗರಸಭೆ ಅಧ್ಯಕ್ಷ ಸಿ.ಗಿರೀಶ್ ಮಾತನಾಡಿ,ಸೇವಾ ಸಂಕಲ್ಪ ಶಾಲೆಗೆ ಅಗತ್ಯವಿರುವ ಎಲ್ಲ ರೀತಿಯ ಸವಲತ್ತುಗಳನ್ನು ಕಲ್ಪಿಸುವುದಾಗಿ ಭರವಸೆ ನೀಡಿದರು.ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕಾಟೀಕೆರೆ ಪ್ರಸನ್ನ ಕುಮಾರ್, ಡಿಡಿಪಿಐ ಪ್ರಕಾಶ್, ಬಿಇಒಮೋಹನ್ ಕುಮಾರ್, ಹೋಟೆಲ್ ಉದ್ಯಮಿ ಮಂಜುನಾಥ ರಾವ್,ಮುಖ್ಯ ಶಿಕ್ಷಕ ಮಲ್ಲಿಕಾರ್ಜುನ್ ಸೇರಿ ಇನ್ನಿತರರು ವೇದಿಕೆಯಲ್ಲಿದ್ದರು. ಶಾಲಾ ಶಿಕ್ಷಕರಾದ ದೀಪಾ, ಗಂಗಾಧರ್ ಒಳಗೊಂಡಂತೆ ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.