ಚನ್ನಪಟ್ಟಣ : ಸತ್ತೇಗಾಲ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡಿದ್ದು, ಅಗತ್ಯ ಬಿದ್ದರೆ ಹೆಚ್ಚುವರಿ ಹಣ ಬಿಡುಗಡೆ ಮಾಡುತ್ತೇನೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆಯಲ್ಲಿ ಕ್ಷೇತ್ರದ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಸತ್ತೇಗಾಲದಿಂದ ಇಗ್ಗಲೂರಿಗೆ ನೀರು ತರುವ ಯೋಜನೆ ಬಗ್ಗೆ ಚರ್ಚೆ ಮಾಡಿದ್ದೇವೆ. ಟನಲ್ ಮೂಲಕ ರಾಮನಗರಕ್ಕೆ ನೀರು ತರುತ್ತಿದ್ದೇವೆ. ಇನ್ನು ಕೇವಲ 600 ಮೀಟರ್ ಕಾಮಗಾರಿ ಮಾತ್ರ ಬಾಕಿ ಇದೆ. ಈ ಯೋಜನೆ ಪೂರ್ಣಗೊಂಡರೆ ಚನ್ನಪಟ್ಟಣಕ್ಕೆ ಸಂಪೂರ್ಣ ನೀರು ಒದಗಿಸಬಹುದಾಗಿದೆ ಎಂದರು.
ಉಪಚುನಾವಣೆಗೂ ಮುನ್ನ ಕ್ಷೇತ್ರದ ಅಭಿವೃದ್ಧಿಗೆ 500 ಕೋಟಿ ರೂ. ಅನುದಾನ ನೀಡಲಾಗಿತ್ತು. ಈ ಸಭೆಯ ಮೂಲಕ ಅದರ ಪ್ರಗತಿ ಪರಿಶೀಲನೆ ಮಾಡಿದ್ದೇವೆ. ನನೆಗುದಿಗೆ ಬಿದ್ದಿದ್ದ ಅನುಮೋದನೆ ಹಾಗೂ ಟೆಂಡರ್ ಬಗ್ಗೆ ಮರು ಪರಿಶೀಲನೆ ಮಾಡಿದ್ದೇವೆ ಎಂದರು.
ಹೊಸ ಸ್ಟೇಡಿಯಂಗೆ ಹಣ ಬಿಡುಗಡೆ ಮಾಡಲು ಸಿಎಂ ಒಪ್ಪಿದ್ದಾರೆ. ನಿವೇಶನ ಹಾಗೂ ಮನೆ ಹಂಚುವ ಕಾರ್ಯವೂ ಚುರುಕುಗೊಳ್ಳುತ್ತದೆ. ಚನ್ನಪಟ್ಟಣ ತಾಲೂಕಿನ ಅಭಿವೃದ್ಧಿ ಕುರಿತು ಬೆಂಗಳೂರಿನಲ್ಲೂ ರಾಜ್ಯಮಟ್ಟದ ಅಧಿಕಾರಿಗಳ ಜತೆ ಸಭೆ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಎಂದರು.
ಎಚ್ಡಿಕೆಗೆ ಟಾಂಗ್!!: ಸತ್ತೇಗಾಲ ಕುಡಿಯುವ ನೀರಿನ ಯೋಜನೆ ನಮ್ಮ ಪ್ರಾಜೆಕ್ಟ್ ಎಂಬ ಕುಮಾರಸ್ವಾಮಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ನಾವೇನು ಮಾಡಿಲ್ಲ ಬಿಡಿ, ಎಲ್ಲ ಅವರೇ ಮಾಡಿರೋದು. ಅವರು ಈಗ ಮಲಗಿದ್ದಾರೆ, ಅವರನ್ಯಾಕೆ ಎದ್ದೇಳಿಸುತ್ತೀರಾ? ರೆಸ್ಟ್ ತೆಗೆದುಕೊಳ್ತಿದ್ದಾರೆ, ತೊಂದರೆ ಕೊಡಬೇಡಿ ಎನ್ನುವ ಮೂಲಕ ಕುಮಾರಸ್ವಾಮಿಗೆ ಡಿಕೆಶಿ ಟಾಂಗ್ ನೀಡಿದರು.
ನೋಟಿಫಿಕೇಷನ್ ಮಾಡಿದ್ದು ಕುಮಾರಸ್ವಾಮಿ!
ಬಿಡದಿ ಟೌನ್‌ಶಿಪ್ ವಿರುದ್ಧ ರೈತರ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಯೋಜನೆಗೆ ನೋಟಿಫಿಕೇಷನ್ ಈ ಯೋಜನೆ ಮಾಡಿದ್ದು ಕುಮಾರಸ್ವಾಮಿ. ಅವರೇ ಡಿನೋಟಿಫಿಕೇಷನ್ ಮಾಡಬಹುದಿತ್ತು. ಈಗ ನಾನು ಡಿನೋಟಿಫೈ ಮಾಡೋದಕ್ಕೆ ತಯಾರಿಲ್ಲ. ಆದರೆ, ಆಸ್ತಿ ಕಳೆದುಕೊಳ್ಳುವ ನಮ್ಮ ಜಿಲ್ಲೆಯ ಜನತೆಗೆ ಅದರ ಬೆಲೆಯ ಎರಡರಿಂದ ಮೂರು ಪಟ್ಟು ಪರಿಹಾರ ಬರುವಂತೆ ಮಾಡಲಾಗುವುದು ಎಂದರು.
ಬಿಡದಿ ಟೌನ್ ಶಿಪ್ ಕೈಬಿಡುವಂತೆ ಸಿಎಂಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಸಂಸದ ಡಾ.ಮಂಜುನಾಥ್ ಪತ್ರ ಬರೆದ ವಿಚಾರದ ಬಗ್ಗೆ ಮಾತನಾಡಿದ ಅವರು, ಅವರು ಏನು ಬೇಕಾದರೂ ಮಾಡಿಕೊಳ್ಳಲಿ. ನಾನು ಇರೋವರೆಗೂ ಎಷ್ಟು ಬೇಕೋ ಅಷ್ಟು ಅಭಿವೃದ್ಧಿ ಮಾಡುತ್ತೇನೆ. ಇದನ್ನು ಕೈ ಬಿಡೋದಕ್ಕೆ ಸಿಎಂ ಸಿದ್ದರಾಮಯ್ಯನವರಿಗೂ ಹಕ್ಕಿಲ್ಲ. ಜತೆಗೆ, ನನಗೂ ಹಕ್ಕಿಲ್ಲ. ನಾನು ಡಿನೋಟಿಫಿಕೇಷನ್ ಮಾಡೊದಕ್ಕೆ ಬರೋದಿಲ್ಲ. ರೈತರು ಹೋರಾಟ ಮಾಡಿದರೆ ತಪ್ಪೇನಿಲ್ಲ. ಅವರು ಜಾಸ್ತಿ ಹಣ ಕೊಡಿ ಅಂದರೆ ತಪ್ಪೇನಿಲ್ಲ. ಅವರಿಗೆ ಡಿಕೆ ಶಿವಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ ಅಂತ ಮುಂದೆ ಅರ್ಥ ಆಗುತ್ತದೆ. ಬಿಡದಿಯಲ್ಲೂ ಒಂದು ದಿನ ಸಭೆ ಮಾಡಿ ಅವರ ಸಮಸ್ಯೆ ಆಲಿಸುತ್ತೇನೆ ಎಂದರು.