ಜಿಲ್ಲೆ

ಸತ್ತವರು ಯಾರೆಂದೇ ತಿಳಿಯುತ್ತಿಲ್ಲ : ಜಿಲ್ಲಾಡಳಿತಕ್ಕೆ ಸವಾಲಾದ ಕರೊನಾ ಪರಿಹಾರ ವಿತರಣೆ

ರಾಮನಗರ: ಸರ್ಕಾರವೇನೋ ಕೋವಿಡ್‌ನಿಂದ ಮೃತಪಟ್ಟವರಿಗೆ ಪರಿಹಾರ ನೀಡುವ ಮಹತ್ವದ ಕೆಲಸಕ್ಕೆ ಮುಂದಾಗಿದೆ. ಆದರೆ, ಜಿಲ್ಲೆಯಲ್ಲಿ ಸತ್ತ ಅದೆಷ್ಟೋ ಮಂದಿ ಯಾರು ಎನ್ನುವುದೇ ಇನ್ನು ಪತ್ತೆಯಾಗದ ಹಾಗೂ ಕೆಲವು ಕುಟುಂಬಗಳಲ್ಲಿ ಪರಿಹಾರಕ್ಕಾಗಿ ಕಾಳಗ ನಡೆದಿರುವ ಘಟನೆಗಳು ಕರೊನಾದ ಮತ್ತೊಂದು ಮುಖವನ್ನು ಅನಾವರಣ ಮಾಡಿದೆ.

ಜಿಲ್ಲೆಯಲ್ಲಿ ಕರೊನಾ ಎರಡು ಅಲೆಗಳಲ್ಲಿ ಒಟ್ಟು 337 ಮಂದಿ ಮೃತ ಪಟ್ಟಿದ್ದಾರೆ. ಇದುವರೆಗೂ 291 ಮಂದಿಗೆ ಪರಿಹಾರ ನೀಡಲಾಗಿದೆ. ಉಳಿದ 24 ಪ್ರಕರಣಗಳಲ್ಲಿ ಮನೆ ವಿಳಾಸವೇ ಗೊತ್ತಾಗದಿದ್ದರೆ, 22 ಪ್ರಕರಣಗಳಲ್ಲಿ ಯಾರಿಗೆ ಪರಿಹಾರ ನೀಡಬೇಕೆಂಬುದೇ ಗೊಂದಲಕ್ಕೆ ಕಾರಣವಾಗಿದೆ.

ವಿಳಾಸವೇ ಸಿಗುತ್ತಿಲ್ಲ: ಕೋವಿಡ್‌ನಿಂದ ಮೃತಪಟ್ಟಿರುವವರಿಗೆ ಜಿಲ್ಲಾಡಳಿತವೇ ನೇರವಾಗಿ ಪರಿಹಾರ ನೀಡುತ್ತಿದೆ. 337 ಮಂದಿಯಲ್ಲಿ 24 ಸೋಂಕಿತರು ಸರಿಯಾದ ವಿಳಾಸವನ್ನೇ ನೀಡಿಲ್ಲ. ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ನೀಡಿದ್ದ ವಿಳಾಸಗಳು ತಪ್ಪಾಗಿವೆ. ದಾಖಲಿಸಿರುವ ವಿಳಾಸದಲ್ಲಿ ಮೃತಪಟ್ಟವರ ಕುಟುಂಬಗಳೇ ವಾಸಿಸುತ್ತಿಲ್ಲ. ಹೀಗಾಗಿ, ಮೃತರ ವಾರಸುದಾರರ ಪತ್ತೆಗೆ ಜಿಲ್ಲಾಡಳಿತ ಅರ್ಜಿಯನ್ನು ಆಹ್ವಾನಿಸಿದೆ. ಆದರೂ ಇವರ ಪತ್ತೆ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

22 ಕುಟುಂಬದಲ್ಲಿ ಗೊಂದಲ: ಕೋವಿಡ್ ಸೋಂಕಿನಿಂದ ಮೃತಪಟ್ಟವರ 22 ಕುಟುಂಬಗಳಲ್ಲಿ ಪರಿಹಾರ ಪಡೆಯಲು ಗಲಾಟೆ ಶುರುವಾಗಿದೆ. ಅವರ ಮಕ್ಕಳು ನಮಗೆ ನೀಡಬೇಕು ಎನ್ನುವ ಮೂಲಕ ಹಿರಿ-ಕಿರಿ ಮಕ್ಕಳ ನಡುವೆ ಪ್ರತಿರೋಧ ಶುರುವಾಗಿದೆ. ಇನ್ನು ಕೆಲವಡೆ ಮಕ್ಕಳ ಜತೆಗೆ ಮೃತರ ಪತಿ ಇಲ್ಲವೇ ಪತ್ನಿ ಸಹ ಕಿತ್ತಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇಂತಹ 22 ಕುಟುಂಬಗಳಲ್ಲಿ ಯಾರಿಗೆ ಪರಿಹಾರ ನೀಡಬೇಕು ಎಂಬುದೇ ಜಿಲ್ಲಾಡಳಿತಕ್ಕೆ ತಿಳಿಯುತ್ತಿಲ್ಲ.

5 ತಿಂಗಳ ಮಗುವಿಗೆ ಪರಿಹಾರ: ಪರಿಹಾರದ ಲೆಕ್ಕದಲ್ಲಿ 5 ತಿಂಗಳ ಮಗು ಸಹ ಮೃತ ಪಟ್ಟಿದೆ. ಹೀಗಾಗಿ ಅವರ ಕುಟುಂಬಕ್ಕೆ ಪರಿಹಾರ ನೀಡಬೇಕೇ, ಬೇಡವೇ ಎಂಬ ಗೊಂದಲವು ಜಿಲ್ಲಾಡಳಿತವನ್ನು ಕಾಡುತ್ತಿದೆ. ಈ ಬಗ್ಗೆ ಸ್ಪಷ್ಟನೆ ಪಡೆಯಲು ಸರ್ಕಾರಕ್ಕೆ ಪತ್ರ ಬರೆದಿರುವ ಜಿಲ್ಲಾಧಿಕಾರಿ, ಸರ್ಕಾರದ ನಿರ್ದೇಶನ ಕೋರಿರುವುದು ವಿಶೇಷ. ಅರ್ಜಿ ಸಲ್ಲಿಸಿ: ಕೋವಿಡ್ ಪರಿಹಾರ ಪಡೆಯಲು ಅವರ ಸ್ವಂತ ವಿಳಾಸವಿರುವ ಜಿಲ್ಲೆಗಳಲ್ಲೇ ಪಡೆಯಬೇಕು. ಬೆಂಗಳೂರು ಸೇರಿ ಇತರ ಜಿಲ್ಲೆಗಳಲ್ಲಿ ಮೃತಪಟ್ಟವರು ಸಹ ಅವರ ಸ್ವಂತ ಜಿಲ್ಲೆಗಳಲ್ಲಿ ಅರ್ಜಿ ಸಲ್ಲಿಸಬೇಕು. ರಾಮನಗರ ಜಿಲ್ಲೆಯಲ್ಲಿ ಇಂತಹ 424 ಅರ್ಜಿಗಳು ಸಲ್ಲಿಕೆಯಾಗಿದ್ದು, ಇದರಲ್ಲಿ 389 ಅರ್ಜಿಗಳು ಅಂತಿಮಗೊಂಡಿವೆ. ಹೀಗಾಗಿ ಜಿಲ್ಲಾಡಳಿತ ಮುಕ್ತವಾಗಿ ಅರ್ಜಿ ಆಹ್ವಾನಿಸಿದ್ದು, ಅವುಗಳ ಪರಿಶೀಲನೆ ಬಳಿಕ ಸಂಬಂಧಿಸಿದವರಿಗೆ ಪರಿಹಾರ ದೊರೆಯಲಿದೆ. ಇದರೊಂದಿಗೆ ಸ್ಥಳೀಯ ವೈದ್ಯರು ಸಹ ಕೋವಿಡ್‌ನಿಂದ ಮೃತ ಪಟ್ಟಿರುವ ಬಗ್ಗೆ ಧೃಡಿಕರಿಸಬೇಕು.

ಮೊದಲ ಎರಡು ಅಲೆಗಳಲ್ಲಿ ಮೃತಪಟ್ಟ 337 ಮಂದಿಯಲ್ಲಿ 291 ಕುಟುಂಬಗಳಿಗೆ ಪರಿಹಾರ ನೀಡಲಾಗಿದೆ. ಉಳಿದಂತೆ 24 ಪ್ರಕರಣಗಳಲ್ಲಿ ಮನೆ ವಿಳಾಸ ಪತ್ತೆಯಾಗಿಲ್ಲ. 22 ಪ್ರಕರಣಗಳಲ್ಲಿ ತಕರಾರು ಇದೆ. ರಾಮನಗರ ಜಿಲ್ಲೆಯ ವಿಳಾಸ ಹೊಂದಿದ್ದು ಹೊರ ಜಿಲ್ಲೆಗಳಲ್ಲಿ ಮೃತ ಪಟ್ಟಿರುವವರಿಗೆ ಪರಿಹಾರ ನೀಡುವ ಸಂಬಂಧ ಅರ್ಜಿ ಆಹ್ವಾನಿಸಲಾಗಿದ್ದು, 424 ಅರ್ಜಿಗಳು ಸಲ್ಲಿಕೆಯಾಗಿವೆ. ಡಾ.ಕೆ.ರಾಕೇಶ್‌ಕುಮಾರ್, ಜಿಲ್ಲಾಧಿಕಾರಿ