ಕಲಬುರಗಿ: ಸತ್ಕಾರ್ಯಗಳಿಂದ ಜೀವನದಲ್ಲಿ ಸಮೃದ್ಧಿ ಹೊಂದಲು ಸಾಧ್ಯ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.
ವೀರಶೈವ ಧರ್ಮದ ಮೂಲ ಪುರುಷ ಜಗದ್ಗುರು ಶ್ರೀ ರೇಣುಕಾಚಾರ್ಯರು ಅವತರಿಸಿದ ತೆಲಂಗಾಣ ರಾಜ್ಯದ ಭುವನಗಿರಿ ಯಾದಾದ್ರಿ ಜಿಲ್ಲೆಯ ಕೋಲನಪಾಕ್ (ಕೊಲ್ಲಿಪಾಕಿ) ಸ್ವಯಂಭು ಸೋಮೇಶ್ವರ ಕ್ಷೇತ್ರದಲ್ಲಿ ಐದು ದಿನದ ಧಾರ್ಮಿಕ ಕಾರ್ಯಕ್ರಮಕ್ಕೆ ಬುಧವಾರ ಚಾಲನೆ ನೀಡಿದ ಅವರು, ಶಿವನ ಸದ್ಯೋಜಾತ ಮುಖದಿಂದ ಕೊಲ್ಲಿಪಾಕಿ ಶ್ರೀ ಸೋಮೇಶ್ವರ ಮಹಾಲಿಂಗದಿಂದ ಜಗದ್ಗುರು ರೇಣುಕಾಚಾರ್ಯರು ಅವತರಿಸಿದ ಹಾಗೂ ಶಿವಾದ್ವೆತ ತತ್ವ ಸಿದ್ಧಾಂತವನ್ನು ಭೂ ಮಂಡಲದಲ್ಲಿ ನೆಲೆಗೊಳಿಸಿದ ಜಗನ್ಮಂಗಲ ಕ್ಷೇತ್ರ ಇದು. ಇಂಥ ಪುಣ್ಯ ಪವಿತ್ರ ಕ್ಷೇತ್ರದಲ್ಲಿ ಪ್ರತಿವರ್ಷ ತಮ್ಮ ಜನ್ಮದಿನೋತ್ಸವ ನಿಮಿತ್ತ ಐದು ದಿನ ಕಾರ್ಯಕ್ರಮ ನಡೆಸುತ್ತಿರುವುದು ಸಂತಸ ತಂದಿದೆ ಎಂದರು.
ಮನುಷ್ಯ ಜೀವನದಲ್ಲಿ ಬೆಟ್ಟದಷ್ಟು ಸಂಪತ್ತು, ಸಂಪನ್ಮೂಲ ಹೊಂದಿದ್ದರೂ ಮಾನಸಿಕ ಶಾಂತಿ, ನೆಮ್ಮದಿಯಿಲ್ಲ. ಮಹಿಮಾನ್ವಿತ ಜಾಗೃತ ಈ ಕ್ಷೇತ್ರ ಸಂದರ್ಶನ ಮಾಡುವುದರಿಂದ ನೆಮ್ಮದಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಜಗದ್ಗುರು ರೇಣುಕಾಚಾರ್ಯರ ಜ್ಞಾನ ಕ್ರಿಯಾತ್ಮಕ ಮತ್ತು ಸಾಮಾಜಿಕ ಚಿಂತನ ಧಾರೆಗಳು ಮನುಷ್ಯನ ಶ್ರೇಯೋಭಿವೃದ್ದಿಗೆ ಸಹಕಾರಿಯಾಗಿವೆ ಎಂದು ಹೇಳಿದರು.
ನೇತೃತ್ವ ವಹಿಸಿದ್ದ ಮೇಹಕರ ಹಿರೇಮಠದ ಶ್ರೀ ರಾಜೇಶ್ವರ ಶಿವಾಚಾರ್ಯರು ಮಾತನಾಡಿದರು. ಪ್ರಾಸ್ತಾವಿಕ ಮಾತನಾಡಿದ ಮಳಲಿ ಸಂಸ್ಥಾನ ಮಠದ ಶ್ರೀ ಡಾ.ನಾಗಭೂಷಣ ಶಿವಾಚಾರ್ಯರು, ಭವಬಂಧನ ಬಿಡಿಸಿ ಶಿವಜ್ಞಾನ ತುಂಬಿದ ಬದುಕು ನಡೆಸಲು ಗುರು ಮಾರ್ಗದರ್ಶನ ಅವಶ್ಯಕವಾಗಿದೆ ಎಂದರು.
ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಕಾರ್ಯದರ್ಶಿ ಅಣ್ಣಾರಾವ ಬಿರಾದಾರ್, ಗುರುಪಾದಪ್ಪ ಕಿಣಗಿ, ಅರ್ಚಕ ಗಂಗಾಧರ, ಗಿರಿಯಪ್ಪ ಮುತ್ಯಾ ಇತರರಿದ್ದರು. ಸಿದ್ಧರಬೆಟ್ಟ ಕ್ಷೇತ್ರದ ಶ್ರೀ ವೀರಭದ್ರ ಶಿವಾಚಾರ್ಯರು ನಿರೂಪಣೆ ಮಾಡಿದರು.
ನಸುಕಿನ ಜಾವ ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ ರುದ್ರಾಭಿಷೇಕ, ಚಂಡಿಕಾAಬಾ ದೇವಿಗೆ ಕುಂಕುಮಾರ್ಚನೆ ಜರುಗಿತು. ಲೋಕಕಲ್ಯಾಣಕ್ಕಾಗಿ ಶ್ರೀ ರಂಭಾಪುರಿ ಜಗದ್ಗುರುಗಳು ಇಷ್ಟಲಿಂಗ ಮಹಾಪೂಜೆ ನೆರವೇರಿಸಿದರು. ಭಕ್ತರಿಗೆ ಅನ್ನದಾಸೋಹ ವ್ಯವಸ್ಥೆ ಮಾಡಲಾಗಿದೆ ಎಂದು ರಂಭಾಪುರಿ ಪೀಠದ ಕಲಬುರಗಿ ಜಿಲ್ಲಾ ವಕ್ತಾರ ಸಿದ್ರಾಮಪ್ಪ ಆಲಗೂಡಕರ್ ತಿಳಿಸಿದ್ದಾರೆ.