ಮೈಸೂರು: ಸಿಎಂ ಆಗಲು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ್ದಾರೆ ಎಂದು ಶಾಸಕ ಜಿ.ಟಿ.ದೇವೇಗೌಡ ಹೇಳಿದರು.
ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದೆ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕರೆ ಜೆಡಿಎಸ್ ಬೆಂಬಲ ನೀಡುವಂತೆ ಕೇಳಿರಬಹುದು. ಜೆಡಿಎಸ್‌ನ 18 ಶಾಸಕರ ಬೆಂಬಲವನ್ನು ಕೇಳಿರಬಹುದು. ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂದು ಹೇಳಿದರು
ಸದ್ಯದ ಪರಿಸ್ಥಿತಿ ನೋಡಿದರೆ ಅವರು ಬೇರೆ ಕಾರಣಕ್ಕೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿಲ್ಲ. ಮಾಜಿ ಪ್ರಧಾನಿ, ಕೇಂದ್ರ ಸಚಿವರನ್ನು ಭೇಟಿ ಮಾಡಿದ್ದಾರೆ ಅಂದರೆ ಅದಕ್ಕೆ ಇದೇ ಕಾರಣ. ಒಂದು ವೇಳೆ ಸತೀಶ್ ಜಾರಕಿಹೊಳಿಗೆ ಜೆಡಿಎಸ್ ಬೆಂಬಲ ನೀಡಿದರೂ ನಾನು ತಟಸ್ಥನಾಗಿರುತ್ತೇನೆ. ಈ ವಿಚಾರದಲ್ಲಿ ಮಾತ್ರ ಅಲ್ಲ. ಎಲ್ಲ ವಿಚಾರದಲ್ಲೂ ನಾನು ತಟಸ್ಥ ಎಂದು ಪ್ರತಿಕ್ರಿಯಿಸಿದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ ಉಚ್ಚಾಟನೆ ಬಿಜೆಪಿಯ ಆಂತರಿಕ ವಿಚಾರ. ಅದರ ಬಗ್ಗೆ ನಾನು ಹೆಚ್ಚು ಮಾತನಾಡಲ್ಲ. ಈ ಹಿಂದೆ ಅವರ ಬಗ್ಗೆ ಮಾತನಾಡಿದ್ದೆ. ಆಗ ಅವರೇ ಫೋನ್ ಮಾಡಿ ಮಾತನಾಡಿ ಸರಿ ಮಾಡಿಕೊಂಡರು. ಈಗ ನಮ್ಮ ಮಧ್ಯೆ ಏನೂ ಇಲ್ಲ. ಮುಂದೆ ಇನ್ನೂ ಏನೇನು ಬೆಳವಣಿಗೆ ನಡೆಯುತ್ತೋ ಕಾದು ನೋಡೋಣ ಎಂದು ಸೂಚ್ಯವಾಗಿ ಹೇಳಿದರು.
ಹನಿಟ್ರ್ಯಾಪ್ ಏಕೆ ಆಯ್ತು, ಏನು ಎಂಬುದನ್ನು ತನಿಖೆ ಮಾಡಬೇಕು. ತನಿಖೆ ಮಾಡಿದಾಗಲೇ ಎಲ್ಲವೂ ತಿಳಿಯುತ್ತದೆ. ಈ ಕುರಿತು ಸದನದಲ್ಲಿ ಸುನಿಲ್ ಕುಮಾರ್, ಕೆ.ಎನ್.ರಾಜಣ್ಣ ಮಾತನಾಡಿದ್ದಾರೆ. ಕರ್ನಾಟಕ ರಾಜಕಾರಣಕ್ಕೆ ತನ್ನದೇ ಆದ ಇತಿಹಾಸ ಇದೆ. ಇತ್ತೀಚಿನ ದಿನಗಳ ಘಟನೆ ನೋಡಿದರೆ ಪ್ರಜಾಪ್ರಭುತ್ವ ವೇಗವಾಗಿ ಬೆಳೆಯುತ್ತಿದೆ. ಸದನದಲ್ಲಿ ರಾಜ್ಯದ ಅಭಿವೃದ್ಧಿ ವಿಚಾರ ಚರ್ಚೆ ಆಗಬೇಕಿತ್ತು.
ಕೇವಲ ಗಲಾಟೆ ಗದ್ದಲದಲ್ಲೇ ಸದನ ಮುಗಿಯಿತು. ಸಿದ್ದರಾಮಯ್ಯ ಏನು ಬಜೆಟ್ ಮಂಡನೆ ಮಾಡಿದರೂ ಅಂತ ಜನತೆಗೆ ಗೊತ್ತಾಗಲೇ ಇಲ್ಲ. ಅಭಿವೃದ್ಧಿ ವಿಚಾರ ಚರ್ಚೆ ಆಗಿದ್ದರೇ ಜನ ಖುಷಿ ಪಡುತ್ತಿದ್ದರು ಎಂದರು.