ಹಾಸನ: ನಗರದ ಹೊರವಲಯದ ಕೈಗಾರಿಕಾ ಪ್ರದೇಶದ ಬಳಿ ಸೋಮವಾರ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಉಳಿದ ಮೂವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜಿತಾ ತಿಳಿಸಿದರು.
ನಗರದ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆಯ ದ್ವೇಷ ಮತ್ತು ಹಣಕಾಸು ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ನಾಗತವಳ್ಳಿ ಗ್ರಾಮದ ಸತೀಶ ಎಂಬಾತನನ್ನು ರಾಜು ಮತ್ತು ನಾಗ ಎಂಬುವವರು ಮಾರಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ನಂತರ ಆಸ್ಪತ್ರೆಯಲ್ಲಿ ಸತೀಶ ಮೃತಪಟ್ಟದ್ದು, ಪ್ರಕರಣ ದಾಖಲಿಸಿ ನಮ್ಮ ಪೊಲೀಸರ ತಂಡ ಆರೋಪಿಗಳ ಬಂಧನಕ್ಕೆ ಮುಂದಾದಾಗ ರಾಜು ಎಂಬಾತ ಹಾಸನ ತಾಲೂಕಿನ ಕುಂತಿ ಬೆಟ್ಟದಲ್ಲಿ ಇರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ತೆರಳಿ ಬಂಧಿಸಲಾಗಿದೆ. ಈ ಸಂದರ್ಭದಲ್ಲಿ ನಮ್ಮ ಸಿಬ್ಬಂದಿ ರಘು ಎಂಬುವವರ ಮೇಲೆ ಹಲ್ಲೆ ಮಾಡಲು ಯತ್ನಿಸಿದಾಗ ಪೊಲೀಸರು ಆತ್ಮ ರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹಾರಿಸಿದ್ದಾರೆ ಎಂದು ಹೇಳಿದರು.
ಈ ಪ್ರಕರಣದಲ್ಲಿ ಇನ್ನೂ ಮೂವರು ಭಾಗಿಯಾಗಿದ್ದು ಅವರ ಬಂಧನಕ್ಕೆ ತಂಡ ರಚನೆ ಮಾಡಲಾಗಿದ್ದು, ಶೀಘ್ರದಲ್ಲೇ ಉಳಿದ ಆರೋಪಿಗಳನ್ನು ಬಂಧಿಸಲಾಗುವುದು ಮತ್ತು ತನಿಖೆ ನಡೆಸಿ ಯಾವ ಕಾರಣಕ್ಕಾಗಿ ಗಲಾಟೆ ನಡೆದಿತ್ತು ಮತ್ತು ಕೊಲೆ ಉದ್ದೇಶದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೇಳಿದರು
ರೌಡಿಗಳಿಗೆ ಎಚ್ಚರಿಕೆ
ಜಿಲ್ಲೆಯಲ್ಲಿ ಕೆಲ ಪುಡಿ ರೌಡಿಗಳ ಅಟ್ಟಹಾಸ ಹೆಚ್ಚಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಪೊಲೀಸರು ರೌಡಿಗಳನ್ನು ನಿಯಂತ್ರಣಕ್ಕೆ ಇಡಲು ಪ್ರತಿನಿತ್ಯ ಸಾಕಷ್ಟು ಹರಸಾಹಸ ಪಡುತ್ತಿದ್ದಾರೆ. ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ರಾಜುನನ್ನು ಬಂಧಿಸಲು ತೆರಳಿದ ಸಂದರ್ಭದಲ್ಲಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡೇಟು ಹೊಡೆದು ಆತನನ್ನು ಬಂಧಿಸುವ ಮೂಲಕ ಜಿಲ್ಲೆಯಲ್ಲಿ ಪುಡಿ ರೌಡಿಗಳಿಗೆ ಎಚ್ಚರಿಕೆ ಗಂಟೆಯನ್ನು ಜಿಲ್ಲಾ ಪೊಲೀಸ್ ಇಲಾಖೆ ರವಾನಿಸಿದೆ.
ಸಾರ್ವಜನಿಕರೇ ಮಾಹಿತಿ ನೀಡಿ: ಎಸ್‌ಪಿ
ಜಿಲ್ಲೆಯ ಯಾವುದೇ ಊರಿನಲ್ಲಿ ಕಾನೂನು ಸುವ್ಯವಸ್ಥೆ ಧಕ್ಕೆ ಬರುವಂತೆ ಮತ್ತು ಗಲಾಟೆ ಇನ್ನಿತರೆ ಪ್ರಕರಣಗಳು ನಡೆಯುತ್ತಿದ್ದರೆ ಸಾರ್ವಜನಿಕರು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಬಹುದಾಗಿದೆ. ಈ ರೀತಿ ದೂರು ನೀಡಿದವರ ಮಾಹಿತಿಯನ್ನು ಬಹಿರಂಗಪಡಿಸುವುದಿಲ್ಲ ಮತ್ತು ಅವರಿಗೆ ಯಾವುದೇ ರೀತಿ ತೊಂದರೆ ನೀಡುವುದಿಲ್ಲ. ಈ ರೀತಿ ಸಾರ್ವಜನಿಕರು ಸಹಕರಿಸಿದರೆ ಮತ್ತು ಮಾಹಿತಿಯನ್ನು ನೀಡಿದರೆ ಇಂತಹ ಪುರಿ ರೌಡಿಗಳನ್ನು ಮಟ್ಟ ಹಾಕಬಹುದು ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನವಿ ಮಾಡಿದರು.