ಮೈಸೂರು: ವಚನ ಮಾಂಗಲ್ಯದ ಮೂಲಕ ಮೈಸೂರು ಹುಡುಗಿ ಮತ್ತು ನೆದರ್‌ಲ್ಯಾಂಡ್ ಹುಡುಗ ಸತಿಪತಿಯಾಗಿದ್ದಾರೆ. ಹೂಟಗಳ್ಳಿಯ ಸೋಮಶೇಖರಪ್ಪ- ಪ್ರೇಮ ದಂಪತಿಯ ಪುತ್ರಿ ಟಿ.ಎಸ್. ವಿದ್ಯಾ ಮತ್ತು ನೆದರ್‌ಲ್ಯಾಂಡ್ ಬಾಬ್‌ವಾನ್ ಬೊಇಜೆನ್ ಮತ್ತು ಜಾಕ್ವಿಲಿನ್ ದಂಪತಿಯ ಪುತ್ರ ರುಟ್ಗೆರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ವಿಜಯನಗರ 2ನೇ ಹಂತದಲ್ಲಿರುವ ಸಂಭ್ರಮ ಕಲ್ಯಾಣಮಂಟಪದಲ್ಲಿ ಸೋಮವಾರ ವಚನ ಕಲ್ಯಾಣ ಮಹೋತ್ಸವ ನೆರವೇರಿತು. ಯಾವುದೇ ರಾಹುಕಾಲ, ಗುಳಿಕಕಾಲಗಳ ಸೋಂಕಿಲ್ಲದ, ಲಗ್ನ, ರಾಶಿ, ಕೂಟ, ಗಣ, ತಿಥಿ, ವಾರ, ನಕ್ಷತ್ರ ಮತ್ತು ಶಕುನಗಳ ಸುಳಿವಿಲ್ಲದಂತಹ ಶರಣರ ವಚನಾಧಾರಿತ ವಿವಾಹವನ್ನು ಸಾವಿರಾರು ಜನರು ಕಣ್ತುಂಬಿಕೊಂಡರು.
ವಧು-ವರರ ತಂದೆ- ತಾಯಿಗಳು ವಚನವನ್ನು ಸ್ತುತಿಸಿ ವಿವಾಹಕ್ಕೆ ಒಪ್ಪಿಗೆ ನೀಡಿದರೆ, ವಧು-ವರರು ಯಾವುದೇ ಮೂಢನಂಬಿಕೆ ಪ್ರೋತ್ಸಾಹಿಸದೆ, ವೈಚಾರಿಕ ಚಿಂತನೆಯನ್ನು ಹೊಂದಿ, ಶರಣರ ವಚನ ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸುವುದಾಗಿ ಎಲ್ಲರ ಸಮ್ಮುಖದಲ್ಲಿ ವಚನ ಪ್ರತಿಜ್ಞೆ ತೆಗೆದುಕೊಂಡರು. ವರ ವಧುವಿಗೆ ಮಾಂಗಲ್ಯಧಾರಣೆ ಮಾಡಿದರೆ, ವಧು ವರನಿಗೆ ರುದ್ರಾಕ್ಷಿ ಧಾರಣೆ ಮಾಡುವುದರ ಮೂಲಕ ಸಮಾನತೆಯ ತತ್ವಕ್ಕೆ ವಚನ ಮಾಂಗಲ್ಯ ಸಾಕ್ಷಿಯಾಯಿತು.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಪಾಂಡೋಮಟ್ಟಿ ವಿರಕ್ತಮಠದ ಡಾ. ಶ್ರೀ ಗುರುಬಸವ ಮಹಾಸ್ವಾಮಿ ಸಾನ್ನಿಧ್ಯ ವಹಿಸಿದ್ದರು. ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅರಳಿ ನಾಗರಾಜ ಗಂಗಾವತಿ ಅವರು ಧ್ವಜಾರೋಹಣ ನೆರವೇರಿಸಿದರು. ಹೆಬ್ಬಾಳು ಮಲ್ಲೇಗೌಡ್ರು, ಜಾಕ್ವಿಲಿನ್, ಫೆಡ್ರಿಕ್, ಬಸಪ್ಪ, ಗಿರಿಜಮ್ಮ ಉಪಸ್ಥಿತರಿದ್ದರು.
ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಮತ್ತು ರೂಪ ಕುಮಾರಸ್ವಾಮಿ ಕನ್ನಡ ಮತ್ತು ಆಂಗ್ಲಭಾಷೆ ಎರಡರಲ್ಲೂ ವಚನ ಅನುವಾದ ಮಾಡಿದರು.