ಸೋಮವಾರಪೇಟೆ: ವಿರಾಜಪೇಟೆ-ಬೈಂದೂರು ರಾಜ್ಯ ಹೆದ್ದಾರಿ 27ರ ಐಗೂರು ಜಂಕ್ಷನ್‌ನಲ್ಲಿ ಚೋರನಹೊಳೆಗೆ ನೂತನ ಸೇತುವೆ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರ 10 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿ ಆದೇಶ ಹೊರಡಿಸಿದೆ.
ಶಾಸಕ ಡಾ.ಮಂತರ್‌ಗೌಡ ಅವರು ಬೆಳಗಾವಿ ಅಧಿವೇಶನದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ಕುಸಿಯುವ ಹಂತದಲ್ಲಿರುವ ಬ್ರಿಟಿಷರ ಕಾಲದ ಕಬ್ಬಿಣದ ಸೇತುವೆಯ ದುಸ್ಥಿತಿ ಬಗ್ಗೆ ಮನವರಿಕೆ ಮಾಡಿಕೊಟ್ಟ ಹಿನ್ನೆಲೆಯಲ್ಲಿ ಅನುದಾನ ಬಿಡುಗಡೆಗೊಳಿಸಿದ್ದಾರೆ.
1837ರಲ್ಲಿ ಬ್ರಿಟಿಷ್ ಅಧಿಕಾರಿ ಲಾರ್ಡ್ ಲೂಯಿಸ್ ಕಾಲದಲ್ಲಿ ಕಬ್ಬಿಣದ ಸೇತುವೆ ನಿರ್ಮಿಸಲಾಗಿತ್ತು. ಆದರೆ ಸಂಪೂರ್ಣ ಶಿಥಿಲವಾಗಿತ್ತು. ಹೀಗಾಗಿ ಕಬ್ಬಿಣ ಸೇತುವೆ ತೆರವುಗೊಳಿಸಿ ನೂತನ ಸೇತುವೆ ನಿರ್ಮಿಸಬೇಕೆಂದು ಕಳೆದ ಹತ್ತು ವರ್ಷಗಳಿಂದಲೂ ಸ್ಥಳೀಯರು ಒತ್ತಾಯಿಸುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮಾದಾಪುರ, ಹಟ್ಟಿಹೊಳೆ ಹಾಗು ಕುಶಾಲನಗರ ಕೊಪ್ಪದಲ್ಲಿ ಹೊಸ ಸೇತುವೆಗಳು ನಿರ್ಮಾಣವಾದವು. ಆದರೆ ಐಗೂರಿನಲ್ಲಿ ಸೇತುವೆ ನಿರ್ಮಾಣವಾಗಿರಲಿಲ್ಲ.
ಒಂದು ತಿಂಗಳ ಈಚೆಗೆ ಎರಡು ಬಾರಿ ಸೇತುವೆ ಮೇಲಿನ ರಸ್ತೆ ಬಿರುಕು ಬಿಟ್ಟು ಹೊಂಡ ನಿರ್ಮಾಣವಾಗಿತ್ತು. ಈ ಘಟನೆಯಿಂದ ಸ್ಥಳೀಯರು, ಸಾರ್ವಜನಿಕರು ಆತಂಕಗೊಂಡಿದ್ದರು. ಸ್ಥಳಕ್ಕೆ ಶಾಸಕರು ತೆರಳಿ ಅನುದಾನ ತರುವ ಭರವಸೆ ನೀಡಿದ್ದರು.
ಡಿ.29ರಿಂದ ದೊಡ್ಡ ಸರಕು ವಾಹನಗಳ ಸಂಚಾರ ನಿಷೇಧಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ ತಂತ್ರಜ್ಞರು ಭೇಟಿ ನೀಡಿ ಸೇತುವೆಯ ಕಬ್ಬಿಣದ ಸಲಾಕೆಗಳನ್ನು ವೆಲ್ಟಿಂಡ್ ಮಾಡಿ ಸರಿಪಡಿಸುವ ಪ್ರಯತ್ನ ಮಾಡಿದ್ದರು.
ಲೋಕೋಪಯೋಗಿ ಇಲಾಖೆಯಿಂದ ಸೇತುವೆಗೆ ಬೇಕಾದ ಜಾಗಕ್ಕೆ ಸರ್ವೇ ಕಾರ್ಯ ನಡೆಯುತ್ತಿದೆ. ಭೂಸ್ವಾದೀನದ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ವ್ಯವಸ್ಥಿತ ಸೇತುವೆ ನಿರ್ಮಾಣದ ಬಗ್ಗೆ ತಂತ್ರಜ್ಞರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳುತ್ತೇವೆ. ಹದಿನೈದು ದಿನಗಳ ಒಳಗೆ ಕ್ರಿಯಾಯೋಜನೆ ಪೂರ್ಣಗೊಂಡು ಟೆಂಡರ್ ಪ್ರಕ್ರಿಯೆ ಮುಗಿಸಿ, ಮುಂದಿನ ಒಂದು ತಿಂಗಳಲ್ಲಿ ಕಾಮಗಾರಿ ಪ್ರಾರಂಭಿಸಲಾಗುವುದು.
ಎಂ.ಎಚ್.ವಿಜಯ್ ಕುಮಾರ್
ಸೇತುವೆ ಉಸ್ತುವಾರಿ ಇಂಜಿನಿಯರ್, ಲೋಕೋಪಯೋಗಿ ಇಲಾಖೆ.