ಜಿಲ್ಲೆ

ಸತತ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆ

ಆಲೂರು :  ಕಳೆದ ಒಂದು ವಾರದಿಂದ ಸತತವಾಗಿ ಬೀಳುತ್ತಿರುವ ಮಳೆಯಿಂದಾಗಿ ಕೃಷಿ ಚಟುವಟಿಕೆಗೆ ತೀವ್ರ ಹಿನ್ನೆಡೆಯಾಗಿದೆ. ರೈತರು ಕಟಾವಿಗೆ ಬಂದ ಬೆಳೆಗಳ ರಕ್ಷಣೆಗೆ ಪರದಾಡುವಂತಾಗಿದೆ.


ಶುಂಠಿ ಬೆಳೆಗೆ ಕೊಳೆ ರೋಗ ಕಾಣಿಸಿಕೊಂಡಿದ್ದರೆ, ಮುಸುಕಿನ ಜೋಳದ ಬೆಳೆಯ ಕಟಾವಿಗೆ ತೊಂದರೆಯಾಗಿದೆ. ಪ್ರಮುಖ ವಾಣಿಜ್ಯ ಬೆಳೆಯಾದ ಮುಸುಕಿನ ಜೋಳವನ್ನು ತಾಲೂಕಿನಲ್ಲಿ ಈ ಬಾರಿ 7830 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ.


ಬಹಳಷ್ಟು ರೈತರು ಆಲೂಗಡ್ಡೆ, ಶುಂಠಿ ಬೆಳೆ ಬಿಟ್ಟು ಮುಸುಕಿನ ಜೋಳ ಬೆಳೆದಿದ್ದರು. ಹೀಗಾಗಿ ಬೆಳೆ ಪ್ರದೇಶದ ವಿಸ್ತೀರ್ಣದಲ್ಲೂ ಹೆಚ್ಚಳವಾಗಿತ್ತು. ಉತ್ತಮವಾಗಿ ಫಸಲು ಬಂದಿತ್ತು.ಈ ತಿಂಗಳಿನಲ್ಲಿ ಬಿದ್ದ ಬಾರಿ ಮಳೆಗೆ  ಮುಸುಕಿನ ಜೋಳದ ಬೆಳೆಗೆ ಹಾನಿಯಾಗಿದೆ ಅಲ್ಲದೆ ಬೆಳೆಯ ಕಟಾವಿನ ಹಂತದಲ್ಲಿರುವ ರೈತರನ್ನು ಮಳೆ ಮತ್ತಷ್ಟು ಚಿಂತೆಗೆ ದೂಡಿದೆ.

''ಬೆಳೆ ನೀರು ಕುಡಿದು ಹಾಳಾಗುವ ಅಪಾಯ ಎದುರಾಗಿದೆ. ಮಳೆ ನಿಂತು ಒಂದು ವಾರ ಸತತವಾಗಿ ಬಿಸಿಲು ಬಂದಲ್ಲಿ ಜೋಳದ ಕಟಾವಿಗೆ ಅನುಕೂಲವಾಗಲಿದೆ. ಇಲ್ಲದೆ ಇದೇ ರೀತಿ ಮಳೆ ಮುಂದುವರಿದಲ್ಲಿ ಬೆಳೆ ಹಾಳಾಗಿ ಕೈಗೆ ಬಂದ ತುತ್ತು ಬಾಯಿಗೆ ಇಲ್ಲ ಎಂಬ ಸ್ಥಿತಿ ಉಂಟಾಗಲಿದೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜೋಳದ ಕಟಾವಿಗೆ  ಸಂಕಷ್ಟ ಎದುರಾಗಿದೆ. ಇದರಿಂದ ಇಳುವರಿ ಕುಂಠಿತಗೊಳ್ಳುವ ಆತಂಕ ನಿರ್ಮಾಣವಾಗಿದೆ. ಕಟಾವು ಹಂತಕ್ಕೆ ಬಂದ ಜೋಳವು ಮಳೆ, ಗಾಳಿಯಿಂದಾಗಿ ನೆಲಕಚ್ಚಿದೆ. ಇದರಿಂದ ರೈತರು ಈ ಬಾರಿ ಮಳೆಯಿಂದ ನಷ್ಟದ ಸುಳಿಯಲ್ಲಿಸಿಲುಕುವಂತೆ ಮಾಡಿದೆ ''         -ತುರಗನಹಳ್ಳಿ ಗ್ರಾಮದ ಕೃಷಿಕ ವೆಂಕಟೇಗೌಡ.
''ತಾಲೂಕಿನ ಕಸಬಾ,ಪಾಳ್ಯ,ಕುಂದೂರು ಹಾಗೂ ಕೆ. ಹೊಸಕೋಟೆ ಹೋಬಳಿಯ ಕೆಲವು ಭಾಗಗಳಲ್ಲಿ  ಸೇರಿ ಸುಮಾರು 7830 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಲಾಗಿತ್ತು.ಸೆಪ್ಟೆಂಬರ್‌ನಲ್ಲಿ ಸುರಿದ ಮಳೆಗೆ 1,730 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಗೆ ಹಾನಿಯಾಗಿದೆ. ಈ ಬಗ್ಗೆ ಸರ್ಕಾರಕ್ಕೆ ವರದಿ ನೀಡಲಾಗಿದೆ. ಈಗಾಗಲೇ ರೈತರ ಖಾತೆಗೆ ಒಂದು ಹೆಕ್ಟೇರ್‌ಗೆ 13,400 ರೂ. ನಂತೆ ಪರಿಹಾರ ಹಣ ಹಾಕಲಾಗುತ್ತಿದೆ. ಇನ್ನು ತಾಲೂಕಿನ ಕೆ.ಹೊಸಕೋಟೆ ಹೋಬಳಿಯಲ್ಲಿ ಕಾಫಿ, ಏಲಕ್ಕಿ, ಮೆಣಸು ಬೆಳೆಯಲಾಗುತ್ತಿದೆ. ಈ ಬೆಳೆ ಬಹುವಾರ್ಷಿಕ ಬೆಳೆ ಆಗಿರುವುದರಿಂದ ತೋಟಗಾರಿಕೆ ಇಲಾಖೆ ಸಮೀಕ್ಷೆ ನಡೆಸಿ ಹಾನಿಯಾದ ರೈತರಿಗೆ ಹೆಚ್ಚು ಪರಿಹಾರ ನೀಡಲಾಗುತ್ತಿದೆ''

- ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಮನು