ಕೊಳ್ಳೇಗಾಲ: ಸತತವಾಗಿ ಬಿದ್ದ ಮಳೆಯಿಂದಾಗಿ ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳ ಜನವಸತಿ ಪ್ರದೇಶಗಳು ಹಾಗೂ ರಸ್ತೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮಳೆಯ ಆರ್ಭಟದಿಂದ ಪಟ್ಟಣದಲ್ಲಿರುವ ದೊಡ್ಡರಂಗನಾಥ ಮತ್ತು ಚಿಕ್ಕರಂಗನಾಥ ಕೆರೆ ಭರ್ತಿಯಾಗಿದ್ದು, ಕೆರೆಗೆ ಹೊಂದಿಕೊಂಡಂತಿರುವ ಗ್ರಾಮಾಂತರ ಪ್ರದೇಶ ವ್ಯಾಪ್ತಿಯ ಮಧುವನಹಳ್ಳಿ ಗ್ರಾಮದ ಜೆ.ವಿ.ಗೌಡ ಕಾಲನಿಗೆ ನೀರು ನುಗ್ಗಿದೆ. ಅಂತೆಯೇ ಪಟ್ಟಣದ ಆದರ್ಶ ಬಡಾವಣೆಗೆ ನೀರು ತುಂಬಿ ಅವಾಂತರ ಸೃಷ್ಟಿಯಾಗಿದ್ದು, ಸುಮಾರು 40 ಮನೆಗಳು ಜಲಾವೃತವಾಗಿವೆ.
ಸದ್ಯ ಮಧುವನಹಳ್ಳಿ ಗ್ರಾಮದ 70ಕ್ಕೂ ಸಂತ್ರಸ್ತರನ್ನು ಪಟ್ಟಣದಲ್ಲಿರುವ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ತೆರೆಯಲಾಗಿದ್ದ ಕಾಳಜಿ ಕೇಂದ್ರಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಕಂಟಕಪ್ರಾಯವಾದ ಸುವರ್ಣಾವತಿ: ಸುವರ್ಣಾವತಿ ನದಿಗೆ ಅಪಾರ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ನದಿ ಸಮೀಪವಿರುವ ಮಾಂಬಳ್ಳಿ, ಸೂರಪುರ, ಕುಣಗಳ್ಳಿ ಹಾಗೂ ಮುಳ್ಳೂರು-ಕಲಿಯೂರು ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಸೇತುವೆ ಜಲಾವೃತವಾಗಿದ್ದು, ಸಂಚಾರಕ್ಕೆ ತೀವ್ರ ಅಡಚಣೆಯಾಗಿದೆ. ಈ ಭಾಗದಲ್ಲಿ ನದಿ ತಟದಲ್ಲಿರುವ 10ಕ್ಕೂ ಹೆಚ್ಚು ಕಿ.ಮೀ. ವ್ಯಾಪ್ತಿಯ ಸಾವಿರಾರು ಎಕರೆ ಜಮೀನಿಗೆ ನೀರು ತುಂಬಿಕೊಂಡು ಬೆಳೆ ನಷ್ಟವಾಗಿದೆ.
ಶಾಸಕ ಆರ್.ನರೇಂದ್ರ, ಎನ್.ಮಹೇಶ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ತಹಸೀಲ್ದಾರ್ ಮಂಜುಳಾ ಹಾಗೂ ನೀರಾವರಿ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಅನಾಹುತಗೊಂಡ ಸ್ಥಳಗಳಿಗೆ ಭೇಟಿ ಕೊಟ್ಟು ಪರಿಶೀಲಿಸಿದ್ದು, ಮನೆ ಮುಳುಗಡೆಗೊಂಡು ಸಂಕಷ್ಟಕ್ಕೀಡಾದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡುತ್ತಿದ್ದಾರೆ.
ನಗರಸಭೆ ಸದಸ್ಯೆಯ ಮನೆ ಮುಳುಗಡೆ: ಬೆಂಡರಹಳ್ಳಿ ಗ್ರಾಮದಲ್ಲಿರುವ ನಗರಸಭಾ ಸದಸ್ಯೆ ರಮ್ಯಾ ಮಹೇಶ್ ಎಂಬುವರ ತೋಟದ ಮನೆಗೆ ಜಲ ದಿಗ್ಬಂಧನವಾಗಿದ್ದು, ಮನೆ ಸದಸ್ಯರು ಬೇರೆಡೆ ಸ್ಥಳಾಂತರಗೊಂಡಿದ್ದಾರೆ.