ಜಿಲ್ಲೆ

ಸತತ ಅಧ್ಯಯನವೇ ಯಶಸ್ಸಿನ ಸೂತ್ರ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಅಂದಾಗಲೇ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ರೈಲ್ವೆ ಇಲಾಖೆ ಮುಖ್ಯ ಇನ್‌ಸ್ಪೆಕ್ಟರ್ ಯೋಗೇಶ ಜಪಾತಿ ಹೇಳಿದರು.
ನಗರದ ಕ್ಲಾಸಿಕ್ ಕೆಎಎಸ್, ಐಎಎಸ್ ಸ್ಟಡಿ ಸರ್ಕಲ್ ಸಂಸ್ಥೆಯಲ್ಲಿ ಸಮಾಜ ಕಲ್ಯಾಣ, ಅಲ್ಪಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಪರೀಕ್ಷಾ ಪೂರ್ವ ತರಬೇತಿಗೆ ಆಯ್ಕೆಯಾದ ಆರ್‌ಆರ್‌ಬಿ ಮತ್ತು ಎಸ್‌ಎಸ್‌ಸಿ ವಿದ್ಯಾರ್ಥಿಗಳ ತರಬೇತಿ ಉದ್ಘಾಟಿಸಿ ಅವರು ಮಾತನಾಡಿದರು.
ರೈಲ್ವೆ ಸೇರಿದಂತೆ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಲು ಕನ್ನಡಿಗರು ಮುಂದೆ ಬರಬೇಕು. ಸರ್ಕಾರ ಉಚಿತ ತರಬೇತಿಗೆ ಅವಕಾಶ ನೀಡುತ್ತಿದ್ದು, ವಿದ್ಯಾರ್ಥಿಗಳು ಸದುಪಯೋಗಪಡೆಯಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕ್ಲಾಸಿಕ್ ಸಮೂಹ ಸಂಸ್ಥೆಗಳ ನಿರ್ದೇಶಕ ಲಕ್ಷ್ಮಣ ಉಪ್ಪಾರ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಾಗಿ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬೇಕು. ಯಾರೊಂದಿಗೂ ಹೋಲಿಕೆ ಮಾಡಿಕೊಳ್ಳದೆ ಕೀಳರಿಮೆ ತೊರೆದು ಬದ್ಧತೆ ಮತ್ತು ಧೈರ್ಯದಿಂದ ಮುನ್ನುಗ್ಗಬೇಕು. ವಿದ್ಯಾರ್ಥಿಗಳು ಸರ್ಕಾರದ ಉಚಿತ ತರಬೇತಿ ಸದುಪಯೋಗ ಪಡೆದು ಗುರಿಮುಟ್ಟಬೇಕು ಎಂದರು.
ಪ್ರಾಧ್ಯಾಪಕರಾದ ನವೀನ ಹೊಸಂಗಡಿ, ಮುಖ್ಯ ವ್ಯವಸ್ಥಾಪಕಿ ಸುಜಾತಾ ಪಿ., ಇತರರು ಇದ್ದರು. ದೀಪಕ ಜೋಡಂಗಿ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ಕುಪ್ಪಸಗೌಡ್ರ ನಿರೂಪಿಸಿದರು.