ಜಿಲ್ಲೆ

ಸತತ ಅಧ್ಯಯನದಿಂದ ಯಶಸ್ಸು ಸಾಧ್ಯ

ಮದ್ದೂರು: ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಕಠಿಣ ಪರಿಶ್ರಮವಹಿಸಿ ಅಧ್ಯಯನ ಮಾಡಿದರೆ ಉನ್ನತ ಹುದ್ದೆಗೇರಬಹುದು ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಮತ್ತೀಕೆರೆ ಜಯರಾಮು ಹೇಳಿದರು.


ಪಟ್ಟಣದ ಎಚ್.ಕೆ.ವೀರಣ್ಣಗೌಡ ಪದವಿಪೂರ್ವ ಕಾಲೇಜಿನಲ್ಲಿ ಮಂಗಳೂರು ಮಹೇಶ್ ಕಾಲೇಜು ಪೌಂಢೇಷನ್ ವತಿಯಿಂದ ಸೋಮವಾರ ಆಯೋಜಿಸಿದ್ದ ಸಿ.ಇ.ಟಿ., ನೀಟ್ ಕೋಚಿಂಗ್ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.


ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಸರಿಸಮಾನವಾದ ಜ್ಞಾನ ಹೊಂದಿದ್ದರೂ ಮಾರ್ಗದರ್ಶನದ ಕೊರತೆಯಿಂದ ಉನ್ನತ ಹುದ್ದೆಗೇರಲು ಸಾಧ್ಯವಾಗುತ್ತಿಲ್ಲ. ಇಂತಹ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಉನ್ನತ ಸ್ಥಾನಕ್ಕೆ ಹೋಗಲು ಶಿಕ್ಷಕರು ಸಹಕರಿಸಬೇಕು ಎಂದರು.


ಮಂಗಳೂರು ಮಹೇಶ್ ಫೌಂಡೇಷನ್‌ನ ಶೈಕ್ಷಣಿಕ ಮುಖ್ಯಸ್ಥ ರಾಘವೇಂದ್ರ ಭಾರದ್ವಾಜ್ ಮಾತನಾಡಿ, ಗ್ರಾಮೀಣ ಪ್ರದೇಶ ಅಥವಾ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳೆಂಬ ಕೀಳರಿಮೆ ಬಿಟ್ಟು ದೊಡ್ಡ ಗುರಿ ಇಟ್ಟುಕೊಂಡು ಸತತ ಪ್ರಯತ್ನ, ನಿರಂತರ ಅಧ್ಯಯನದಲ್ಲಿ ತೊಡಗಿಸಿಕೊಳ್ಳಬೇಕು. ಆಗ ಮಾತ್ರ ಗುರಿ ಮುಟ್ಟಲು ಸಾಧ್ಯ. ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಂಡರೆ ವೈದ್ಯಕೀಯ ಸೇರಿದಂತೆ ಇತರ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಬಹುದು ಎಂದರು.


ಎಂ.ಎಚ್.ಚನ್ನೇಗೌಡ ವಿದ್ಯಾಸಂಸ್ಧೆಯ ಕಾರ್ಯದರ್ಶಿ ಸಿ.ಅಪೂರ್ವಚಂದ್ರ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಗಳಾದ ಪ್ರದೀಪ್‌ಕುಮಾರ್, ಲೋಹಿತ್, ನವೀನ್ ಕುಮಾರ್ ಅವರು ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ಸಿದ್ಧತೆ ಕುರಿತು ವಿಶೇಷ ಉಪನ್ಯಾಸ ನೀಡಿದರು.


ಪ್ರಾಂಶುಪಾಲರಾದ ಜಿ.ಎಸ್.ಶಂಕರೇಗೌಡ, ಯು.ಎಸ್.ಶಿವಕುಮಾರ್, ಉಪಪ್ರಾಂಶುಪಾಲೆ ಜಿ.ಎಸ್.ನಂದಿನಿ, ಉಪನ್ಯಾಸಕರಾದ ಎಚ್.ಎಸ್.ಪಂಚಲಿಂಗೇಗೌಡ, ಎನ್.ರೇವಣ್ಣ, ಜಿ.ಸುರೇಂದ್ರ, ಎಸ್.ಪ್ರೇಮಕುಮಾರಿ, ಕೌಶಲ್ಯ, ಲೀಲಾವತಿ ಇದ್ದರು.