ತರೀಕೆರೆಯಲ್ಲಿ ಭಾವಸಾರ ಕ್ಷತ್ರೀಯ ಸಮಾಜದಿಂದ ದೇಗುಲ ಹಾಗೂ ಸಭಾಭವನ ನಿರ್ಮಾಣಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಡಿ.ಎಸ್.ಸುರೇಶ್ ಭೂಮಿಪೂಜೆ ನೆರವೇರಿಸಿದರು. ಶ್ರೀನಿವಾಸ ಪಿಸ್ಸೆ, ಎಂ.ಗಿರಿಜಾ, ಟಿ.ಎಸ್.ಪ್ರಕಾಶ್ ವರ್ಮ, ಕೆ.ಸುನೀಲ್ ಮಹಳತ್ಕರ್, ಸುನೀಲ್ ಇತರರಿದ್ದರು. 
ಜಿಲ್ಲೆ

ಸಣ್ಣ ಸಮುದಾಯಕ್ಕೆ ಒಗ್ಗಟ್ಟೇ ಶಕ್ತಿ

ತರೀಕೆರೆ: ದಾಸರು, ಕೀರ್ತನಕಾರರು ಹಾಕಿಕೊಟ್ಟ ಪರಂಪರೆ ನಮಗೆ ಉಪದೇಶವಾಗಿದ್ದು, ಭಜನೆ, ಕಲಿಯುಗದಲ್ಲಿ ಕೀರ್ತನೆಗೆ ದೇವರು ಒಲಿಯುತ್ತಾನೆಂಬ ನಂಬಿಕೆ ಪ್ರತಿಯೊಬ್ಬರಲ್ಲೂ ಬೇರೂರಿದೆ ಎಂದು ಕೂಡಲಿ ಮಠದ ಡಾ. ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಸ್ವಾಮೀಜಿ ಹೇಳಿದರು.

ಪಟ್ಟಣದ ಎಂ.ಜಿ.ರಸ್ತೆಯಲ್ಲಿ ಅಂದಾಜು 4 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಶ್ರೀ ಪಾಂಡುರಂಗ ವಿಠ್ಠಲ ರುಕ್ಮಾಯಿ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ದುರ್ಗಮ್ಮ ದೇಗುಲ ಹಾಗೂ ಭಾವಸಾರ ಸಭಾಭವನ ಕಟ್ಟಡ ನಿರ್ಮಾಣ ಕಾಮಗಾರಿಗೆ ಗುರುವಾರ ಭೂಮಿಪೂಜೆ ನೆರವೇರಿಸಿ ಆಶೀರ್ಚನ ನೀಡಿದರು.

ಸಂಘಟನೆಯಲ್ಲಿ ಬಲವಿದೆ ಎಂಬುದನ್ನು ಶ್ರೀರಾಮ ತ್ರೇತಾಯುಗದಲ್ಲಿ ಲಂಕೆಗೆ ವಾನರ ಮೂಲಕ ಸೇತುವೆ ನಿರ್ಮಿಸುವಾಗಲೇ ತಿಳಿಸಿಕೊಟ್ಟಿದ್ದಾನೆ. ದೇವಸ್ಥಾನದ ಪರಂಪರೆ ಯುಗ ಯುಗಗಳಿಂದಲೂ ಮುಂದುವರಿದುಕೊಂಡು ಬರುತ್ತಿದ್ದು, ಭಾವಸಾರ ಕ್ಷತ್ರೀಯ ಸಮಾಜ ಕೈಗೊಂಡಿರುವ ಈ ಮಹತ್ಕಾರ್ಯ ಎಲ್ಲರ ಶ್ರಮ ಮತ್ತು ಸಹಕಾರದಿಂದ ಸಾಕಾರಗೊಳ್ಳಲಿದೆ ಎಂದರು.

ಅಖಿಲ ಭಾರತ ಭಾವಸಾರ ಕ್ಷತ್ರೀಯ ಸಮಾಜದ ರಾಜ್ಯಾಧ್ಯಕ್ಷ ಶ್ರೀನಿವಾಸ ಪಿಸ್ಸೆ ಮಾತನಾಡಿ, ರಾಜ್ಯದ ಅಲ್ಲಲ್ಲಿ ನೆಲೆಸಿ ಸಂಘಟನಾತ್ಮಕವಾಗಿ ಹಿಂದೆ ಬಿದ್ದಿರುವ ಸಮಾಜಕ್ಕೆ ರಾಜಕೀಯ ಸ್ಥಾನ ಮಾನ ಇಲ್ಲದಂತಾಗಿದೆ. ಬಡತನವಿದ್ದರೂ ಸ್ವಾಭಿಮಾನ, ನಿಷ್ಠೆಯಿಂದ ಬದುಕುತ್ತಿರುವ ಭಾವಸಾರ ಕ್ಷತ್ರೀಯ ಸಮಾಜಕ್ಕೆ ಬಲ ತುಂಬಬೇಕು ಎಂದರು.

ಸಮಾಜ ಸೇವಕ ಎಚ್.ಎಂ.ಗೋಪಿಕೃಷ್ಣ, ಪುರಸಭೆ ಸದಸ್ಯ ಟಿ.ಎಂ.ಭೋಜರಾಜ್, ಮಾಜಿ ಅಧ್ಯಕ್ಷ ಟಿ.ಎಸ್.ರಮೇಶ್, ಸಪ್ತಗಿರಿ ಗ್ರೂಪ್ಸ್ ಪ್ರಮುಖ ಎನ್.ಮಂಜುನಾಥ್, ಭಾವಸಾರ ಸಮುದಾಯ ಭವನ ನಿರ್ಮಾಣಕ್ಕೆ ವೈಯಕ್ತಿಕ ದೇಣಿಗೆ ಘೋಷಿಸಿದರು.

ರಾಜ್ಯ ಭಾವಸಾರ ಕ್ಷತ್ರೀಯ ಸಮಾಜದ ಮಾಜಿ ಅಧ್ಯಕ್ಷ ಸುಧೀರ್ ನವುಲೆ, ನಿರ್ದೇಶಕ ಸತ್ಯನಾರಾಯಣ್, ಪುರಸಭೆ ಉಪಾಧ್ಯಕ್ಷೆ ಗಿರಿಜಾ, ಸದಸ್ಯರಾದ ಟಿ.ದಾದಾಪೀರ್, ಪಾರ್ವತಮ್ಮ, ಮಾಜಿ ಅಧ್ಯಕ್ಷ ಟಿ.ಎಸ್.ಪ್ರಕಾಶ್‌ವರ್ಮ, ಮಾಜಿ ಸದಸ್ಯ ಮಿಲ್ಟ್ರಿ ಶ್ರೀನಿವಾಸ್, ಭಾವಸಾರ ಕ್ಷತ್ರೀಯ ಸಮಾಜದ ತಾಲೂಕು ಅಧ್ಯಕ್ಷ ಕೆ.ಸುನೀಲ್ ಮಹಳತ್ಕರ್, ಗೌರವಾಧ್ಯಕ್ಷ ಜಿ.ಲೋಕೇಶ್‌ರಾವ್ ಕೋಣೇಕರ್, ಉಪಾಧ್ಯಕ್ಷ ರಮೇಶ್ ಮಹೇಂದ್ರಕರ್ ಇತರರಿದ್ದರು.

ಹಿಂದುಳಿದ ವರ್ಗದಲ್ಲಿ 833 ಮುಖ್ಯ ಮತ್ತು ಉಪ ಜಾತಿಗಳಿವೆ ಎಂದು ಗುರುತಿಸಲಾಗಿದ್ದು, ಊಹಿಸಲು ಸಾಧ್ಯವಾಗದಷ್ಟು ಸಂಕಷ್ಟದಲ್ಲಿ ಕೆಲವು ಸಮಾಜಗಳಿವೆ. ದೊಡ್ಡ ಜಾತಿಗಳ ನಡುವೆ ಸಣ್ಣ ಜಾತಿಗಳು ಅಸ್ತಿತ್ವ ಕಂಡುಕೊಳ್ಳುವುದು ಕಷ್ಟವಾಗಿದ್ದು, ಈ ದಿಸೆಯಲ್ಲಿ ಸಣ್ಣ, ಸಣ್ಣ ಜಾತಿಗಳಿಗೆ ಶಕ್ತಿ ನೀಡಿ ಸಮಾಜದ ಮುಖ್ಯ ವಾಹಿನಿಗೆ ತರುವ ಅಗತ್ಯ ಇದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ರಾಜ್ಯದಲ್ಲಿ 100 ಜಾತಿಗಳಿಗೆ ಗ್ರಾಪಂ ಸದಸ್ಯ ಸ್ಥಾನ ಕೂಡ ಸಿಗದಂತಾಗಿದೆ. ಪಾಲಕರು ಆತ್ಮವಿಶ್ವಾಸ ಹೆಚ್ಚಿಸಿಕೊಂಡು ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ತರೀಕೆರೆ ಭಾವಸಾರ ಸಮುದಾಯ ಸಭಾಭವನ ನಿರ್ಮಿಸುವ ಯೋಜನೆ ರೂಪಿಸಿಕೊಂಡಿದ್ದು, ಸರ್ಕಾರದಿಂದ ಗರಿಷ್ಠ ಮೊತ್ತದ ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.