ಗೋಣಿಕೊಪ್ಪಲು: ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಗಳಲ್ಲಿ ಹೊಸ ಅನ್ವೇಷಣೆಯೊಂದಿಗೆ ವ್ಯವಸಾಯಕ್ಕೆ ಸಂಬಂಧಿಸಿದ ತಂತ್ರಜ್ಞಾನ ರೂಪುಗೊಳ್ಳುತ್ತಿದ್ದು, ಸಣ್ಣ ರೈತರಿಗೂ ಇದರ ಉಪಯೋಗ ಸುಲಭವಾಗಿ ಸಿಗಬೇಕೆಂಬ ಕಾರಣಕ್ಕೆ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ವೀರೇಂದ್ರ ಕುಮಾರ್ ಹೇಳಿದರು.
ನವದೆಹಲಿಯ ಭಾರತೀಯ ಕೃಷಿ ಅನುಸಂಧಾನ ಪರಿಷತ್ ಹಾಗೂ ವಿವಿಧ ಅಂಗ ಸಂಸ್ಥೆಗಳ ಸಂಶೋಧನಾ ಕೇಂದ್ರ, ದೇಶದ ಕೃಷಿ ವಿಜ್ಞಾನ ಕೇಂದ್ರಗಳು, ಕೃಷಿ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಇತರ ಅಭಿವೃದ್ಧಿ ಇಲಾಖೆಗಳ ಸಹಯೋಗದಲ್ಲಿ ಇಲ್ಲಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ಸ್ಥಳೀಯ ಹವಾಮಾನ, ಮಣ್ಣಿನ ಗುಣ, ಬೆಳೆ ಪದ್ಧತಿ, ರೋಗ ಬಾಧೆ, ಬದಲಾಗುತ್ತಿರುವ ಜೀವನ ಶೈಲಿ, ಕಾರ್ಮಿಕರ ಕೊರತೆ, ಮಾರುಕಟ್ಟೆಯಲ್ಲಿನ ಬೇಡಿಕೆ ಅಂಶ ಮತ್ತಿತರ ವಿಷಯಗಳ ಆಧಾರದಲ್ಲಿ ಕೃಷಿ ಮತ್ತು ತೋಟಗಾರಿಕೆಗೆ ಸಂಬಂಧಿಸಿದ ಸಂಶೋಧನಾ ಸಂಸ್ಥೆಗಳ ವಿಜ್ಞಾನಿಗಳು ನಿರಂತರವಾಗಿ ಸಂಶೋಧನೆ ಮಾಡುತ್ತಿದ್ದಾರೆ. ಹೊಸ ತಳಿಗಳು, ನೂತನ ತಂತ್ರಜ್ಞಾನಗಳ ಅನ್ವೇಷಣೆಯೂ ಆಗುತ್ತಿದೆ. ಇವುಗಳ ಪೈಕಿ ಹೆಚ್ಚಿನವು ವಿಜ್ಞಾನಿಗಳ ಪ್ರಬಂಧ ಮಂಡನೆೆ, ಪದೋನ್ನತಿಗೆ ಸೀಮಿತವಾಗುತ್ತಿದೆಯೇ ಹೊರತು ರೈತರ ಜಮೀನಿಗೆ ಬರುತ್ತಿಲ್ಲ ಎನ್ನುವ ಕೊರಗಿದೆ ಎಂದರು.
ಸಂಶೋಧನಾ ಸಂಸ್ಥೆಗಳು ಸಾಮಾನ್ಯವಾಗಿ ವರ್ಷದಲ್ಲಿ 2-3 ಬಾರಿ ಸ್ಥಳೀಯವಾಗಿ ಕ್ಷೇತ್ರೋತ್ಸವ, ವಿಜ್ಞಾನಿಗಳ ಜತೆ ಸಂವಾದ, ಕೃಷಿ ಮೇಳ, ವಿಚಾರ ಸಂಕಿರಣ.. ಹೀಗೆ ಹಲವು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತಮ್ಮಲ್ಲಿ ಆಗಿರುವ ಬೆಳವಣಿಗೆಯನ್ನು ರೈತರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿರುತ್ತವೆೆ. ಈ ನಿಟ್ಟಿನಲ್ಲಿ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಸಂಸ್ಥೆಗಳ ಅನ್ವೇಷಣೆ, ಹೊಸ ತಂತ್ರಜ್ಞಾನ ಸಣ್ಣ ರೈತರಿಗೂ ತಲುಪು ವಂತಾಗಬೇಕು. ಹಾಗಾಗಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆಗಳಿವೆ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ರೈತರಿಗೆ ಅಣಬೆ ಬೇಸಾಯ, ಹೈನುಗಾರಿಕೆ ಕುರಿತಂತೆ ಮಾಹಿತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಕೆವಿಕೆ ಕೇಂದ್ರದ ವಿಜ್ಞಾನಿ ಎಸ್.ಸಿ ಸುರೇಶ್, ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಕೆಂಚಾರೆಡ್ಡಿ, ಪ್ರಗತಿಪರ ಕೃಷಿಕರಾದ ರವಿಶಂಕರ್, ಸೋಮೆಂಗಡ ಗಣೇಶ್ ತಿಮ್ಮಯ್ಯ ಸೇರಿದಂತೆ ವಿವಿಧ ಗ್ರಾಮಗಳ ಪ್ರಗರಿಪರ ರೈತರು ಉಪಸ್ಥಿತರಿದ್ದರು.