ಮೈಸೂರು: ತಾಲೂಕು, ಜಿಲ್ಲಾಮಟ್ಟದಲ್ಲಿಯೇ ಇತ್ಯಾರ್ಥವಾಗುವ ಸಣ್ಣ, ಪುಟ್ಟ ಸಮಸ್ಯೆಗಳಿಗೂ ಮುಖ್ಯಮಂತ್ರಿ ಬಳಿ ಜನರು ಬರುವುದಾದರೆ ಅಧಿಕಾರಿಗಳು ಯಾಕೆ ಇರಬೇಕು. ಎಲ್ಲರೂ ನನ್ನ ಬಳಿ ಬಂದರೆ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದರ್ಥ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಾರವಾಗಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ಸತತ ಸುಮಾರು 8 ಗಂಟೆ ಕಾಲ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಪ್ರಗತಿ ಪರಿಶೀಲನೆ ನಡೆಸಿದ ಬಳಿಕ ಅಂತಿಮವಾಗಿ ಅಧಿಕಾರಿಗಳಿಗೆ ಜನರೊಂದಿಗೆ ವಿಶ್ವಾಸದಿಂದ ಕೆಲಸ ಮಾಡಬೇಕು ಎನ್ನುವ ನೀತಿ ಪಾಠ ಮಾಡಿದರು.
ಜಾತಿ ಪ್ರಮಾಣಪತ್ರ ಕೊಡಿಸಿ, ಪೋಡಿ ಮಾಡಿಸಿಕೊಡಿಸಿ, ರೇಷನ್ ಕಾರ್ಡ್ ಕೊಡಿಸಿ, ಸರ್ವೆ ಮಾಡಿಸಿ ಎಂದು ಸಣ್ಣ, ಪುಟ್ಟ ಸಮಸ್ಯೆಗಳನ್ನು ಹೊತ್ತು ದೂರದ ಊರುಗಳಿಂದ ಜನರು ಬೆಂಗಳೂರಿಗೆ ನನ್ನನ್ನು ಕಾಣಲು ಬರುತ್ತಾರೆ. ಇವೆಲ್ಲವೂ ತಾಲೂಕು, ಜಿಲ್ಲಾಮಟ್ಟದಲ್ಲಿ ಬಗೆಹರಿಯಬಹುದಾದಂತಹ ಸಮಸ್ಯೆಗಳು. ಇಂತಹ ಸಮಸ್ಯೆಗಳನ್ನು ಬಗೆಹರಿಸಲು ನಿಮ್ಮಿಂದ ಸಾಧ್ಯವಾಗುತ್ತಿಲ್ಲ ಎಂದರೆ ನೀವು (ಅಧಿಕಾರಿಗಳು) ಯಾಕೆ ಇರಬೇಕು ಎಂದು ಪ್ರಶ್ನಿಸಿದರು.
ಸ್ಥಳೀಯವಾಗಿ ಅಧಿಕಾರಿಗಳು, ಸಿಬ್ಬಂದಿ ಜನರಿಗೆ ಸಿಗಬೇಕು. ಎಲ್ಲರೂ ತಾವು ಕೆಲಸ ಮಾಡುವ ಸ್ಥಳದಲ್ಲಿಯೇ ವಾಸ ಮಾಡಬೇಕು. ಜನರಿಂದ ನಿಮಗೆ ಸಂಬಳ, ಕಾರು, ಕೆಲಸದವರು ಎಲ್ಲ ಸಿಗುತ್ತಿರುವುದು. ನೀವು ಮಾಸ್ಟರ್‌ಗಳಲ್ಲ. ನಮ್ಮ ಮಾಸ್ಟರ್‌ಗಳು ಜನರು. ಕೆಲಸ ಮಾಡಿಕೊಡುವಂತೆ ಜನರು ನೂರೆಂಟು ಸಾರಿ ಕಚೇರಿಗೆ ಅಲೆಯಬೇಕಾ?. ಅಂತಹ ಅಧಿಕಾರಿಗಳು ನನ್ನ ಜಿಲ್ಲೆಯಲ್ಲಿ ಇರಲು ನಾನು ಬಿಡುವುದಿಲ್ಲ. ಅಧಿಕಾರಿಗಳು ಹೇಗೆಲ್ಲ ಆಟವಾಡುತ್ತಾರೆ ಎನ್ನುವುದನ್ನು ನಾನು 1984ರಿಂದಲೂ ನಾನು ನೋಡಿದ್ದೇನೆ. ಜನರ ಜೊತೆ ಅಧಿಕಾರಿಗಳು ಆಟವಾಡ ಕೂಡದು. ಕೆಎಟಿಗೆ ಹೋದರೂ ಹೇಗೆ ಪಾಠ ಕಲಿಸಬೇಕು ಎನ್ನುವುದ ಸರ್ಕಾರಕ್ಕೆ ಗೊತ್ತಿದೆ ಎಂದು ಖಡಕ್ ಎಚ್ಚರಿಕೆ ನೀಡಿದರು.
ಜನ ಬರಿಗಾಲಿನಲ್ಲಿ ಬಂದರೂ, ಚೆಡ್ಡಿ ಹಾಕಿಕೊಂಡು ಬಂದರೂ ಅವರೇ ಸರ್ಕಾರದ ಮಾಲೀಕರು. ಕಾರಿನಲ್ಲಿ ಓಡಾಡುವ ಅಧಿಕಾರಿಗಳು ಬರಿ ಗಾಲಿನಲ್ಲಿ ಬರುವವರನ್ನು ಗೌರವದಿಂದ ಕಾಣಬೇಕು. ಅವರ ಸಮಸ್ಯೆ ಆಲಿಸಿ ಪರಿಹಾರ ಒದಗಿಸಿ ಕೊಡಬೇಕು. ಇದು ನಿಮಗೆ ಸರಿಯಾಗಿ ಅರ್ಥ ಮಾಡಿಕೊಳ್ಳದಿದ್ದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟ ಎಚ್ಚರಿಕೆ ನೀಡಿದರು.
ಮೊದಲು ನನ್ನ ಜಿಲ್ಲೆಯಲ್ಲಿ ಜಿಲ್ಲಾಡಳಿತ ಇನ್ನಷ್ಟು ಚುರುಕಾಗಬೇಕು. ನಿಯಮಬದ್ದವಾಗಿ, ಕಾಲ ಮಿತಿಯಲ್ಲಿ ಕೆಲಸ ಮಾಡದಿದ್ದರೆ ಅದನ್ನು ಸರ್ಕಾರ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಜನ ಯಾವ ನಿರೀಕ್ಷೆ ಇಟ್ಟುಕೊಂಡು ಸರ್ಕಾರವನ್ನು ಬದಲಾಯಿಸಿದ್ದಾರೆ ಎನ್ನುವುದನ್ನು ಅರ್ಥ ಮಾಡಿಕೊಂಡು ಕರ್ತವ್ಯ ನಿರ್ವಹಿಸಿ. ಮೈಸೂರು ಜಿಲ್ಲೆ ಶಿಕ್ಷಣ ಸೂಚ್ಯಂಕದಲ್ಲಿ 16ನೇ ಸ್ಥಾನದಲ್ಲಿದೆ ಎಂದರೆ ನಾಚಿಕೆಗೇಡು. ಇದನ್ನು ನಾನು ಸಹಿಸಲ್ಲ. ಶಿಕ್ಷಣ, ಆರೋಗ್ಯ ಸೂಚ್ಯಂಕ ಸೇರಿ ಎಲ್ಲ ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಸೂರು ಮಾದರಿ ಜಿಲ್ಲೆಯಾಗಲೇಬೇಕು. ಆ ರೀತಿ ದಕ್ಷತೆ ಮತ್ತು ಕಾರ್ಯಕ್ಷಮತೆ ಪ್ರದರ್ಶಿಸಿ ಎಂದು ತಿಳಿಸಿದರು.
ಜನ ಸಂಪರ್ಕ ಸಭೆ ಮಾಡಲು ಸೂಚನೆ:
ಜನರ ಸಮಸ್ಯೆಗಳನ್ನು ಸ್ಥಳೀಯವಾಗಿಗೆ ಬಗೆಹರಿಸಲು ಪ್ರತಿ ತಾಲೂಕು, ಜಿಲ್ಲಾಮಟ್ಟದಲ್ಲಿ ಪ್ರತಿ ಮೂರು ತಿಂಗಳಿಗೆ ಒಮ್ಮೆ ಜನಸಂಪರ್ಕ ಸಭೆ ನಡೆಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿರ್ದೇಶನ ನೀಡಿದರು.
ಆರು ತಿಂಗಳ ಬಳಿಕ ಮತ್ತೆ ಕೆಡಿಪಿ ಸಭೆ ನಡೆಸುತ್ತೇನೆ. ಅಷ್ಟರೊಳಗೆ ಪರಿಸ್ಥಿತಿ ಸುಧಾರಿಸಬೇಕು. ಪ್ರಗತಿಯ ವೇಗ ಹೆಚ್ಚಾಗಬೇಕು. ಇಲ್ಲದಿದ್ದರೆ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೊಣೆ ಮಾಡುತ್ತೇನೆ ಎಂದು ಎಚ್ಚರಿಸಿದರು.
ಮಳೆಯ ಅಭಾವ ಇರುವುದರಿಂದ ಜನರು, ರೈತರು ಸಂಕಷ್ಟದಲ್ಲಿದ್ದಾರೆ. ಆದ್ದರಿಂದ ಹೆಚ್ಚಿನ ರೀತಿಯಲ್ಲಿ ಸ್ಪಂದಿಸಿ ದಿನದ 24 ಗಂಟೆಯೂ ಎಲ್ಲ ವಿಭಾಗ, ಇಲಾಖೆಯ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು.
ಮಾದಕ ವಸ್ತು ದಂಧೆ ನಡೆಯುತ್ತಿದ್ದರೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಶಾಂತಿಕದಡುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು. ಠಾಣೆ ವ್ಯಾಪ್ತಿಯಲ್ಲಿ ಇನ್ಸ್‌ಪೆಕ್ಟರ್‌ಗಳ ಗಮನಕ್ಕೆ ಬಾರದ್ದೆ ಏನೂ ನಡೆಯುವುದಿಲ್ಲ. ಹಾಗಾಗಿ ಸಂಬಂಧಪಟ್ಟ ಠಾಣಾಧಿಕಾರಿಗಳನ್ನೇ ಹೊಣೆ ಮಾಡಲಾಗುವುದು. ಪೊಲೀಸ್ ಕಮೀಷನ್, ಡಿಸಿಪಿ. ಎಸ್‌ಪಿಗಳು ಸಿಬ್ಬಂದಿಯನ್ನು ಹಿಡಿತದಲ್ಲಿ ಇಟ್ಟುಕೊಂಡು ಕೆಲಸ ಮಾಡಿಸಬೇಕು ಎಂದರು.