ಜಿಲ್ಲೆ

ಸಣ್ಣ ನೀರಾವರಿ, ನೀರಿನಾಸರೆಗಳ ಗಣತಿಗೆ ತಾಕೀತು

ಚಿತ್ರದುರ್ಗ: ವಿವಿಧ ಇಲಾಖೆಗಳ ಸಹಯೋಗದೊಂದಿಗೆ 7ನೇ ಸಣ್ಣ ನೀರಾವರಿ ಗಣತಿ ಮತ್ತು 2ನೇ ನೀರಿನಾಸರೆಗಳ ಗಣತಿ ಕಾರ್ಯ ಪರಿಣಾಮಕಾರಿಯಾ ಗಿರಬೇಕು. ನಿಖರ ಮಾಹಿತಿ ಸಂಗ್ರಹಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಅಧಿಕಾರಿಗಳಿಗೆ ಸೂಚಿಸಿದರು.

ಡಿಸಿ ಕಚೇರಿಯಲ್ಲಿ ಗುರುವಾರ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಸಾಂಖ್ಯಿಕ ಇಲಾಖೆ ಸಹಯೋಗದಲ್ಲಿ 7ನೇ ಸಣ್ಣ ನೀರಾವರಿ ಮತ್ತು 2ನೇ ನೀರಿನಾಸರೆಗಳ ಗಣತಿ ತರಬೇತಿ ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಅಚ್ಚುಕಟ್ಟಾಗಿ ಯಾವುದೇ ಲೋಪದೋಷಗಳಿಲ್ಲದಂತೆ ಮುಂಬರುವ ಅಕ್ಟೋಬರ್ ಅಂತ್ಯದೊಳಗೆ ಗಣತಿ ಕಾರ್ಯ ಪೂರ್ಣಗೊಳಿಸಬೇಕು ಎಂದರು.

ಎಡಿಸಿ ಬಿ.ಟಿ. ಕುಮಾರಸ್ವಾಮಿ ಮಾತನಾಡಿ, ಎಲ್ಲ ರೀತಿಯ ಅಂತರ್ಜಲ ಯೋಜನೆಗಳು ಮೇಲ್ಮೈ ಜಲಯೋಜನೆಗಳನ್ನು ಗ್ರಾಮವಾರು ಗಣತಿ ಕಾರ್ಯವನ್ನು ಮೊಬೈಲ್ ಆಪ್ ಮೂಲಕ ಗ್ರಾಮ ಆಡಳಿತಾಧಿಕಾರಿಗಳು ನಡೆಸಲಿದ್ದಾರೆ. ಈ ಕುರಿತು ಆಯಾ ತಹಸೀಲ್ದಾರ್‌ಗಳು ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯ ಸಲಹೆ, ಸೂಚನೆ ನೀಡಬೇಕೆಂದರು.

ಗಣತಿ ಕುರಿತು ತಾಲೂಕು ಮಟ್ಟದಲ್ಲೂ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗುವುದು ಎಂದು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗದ ಎಇಇ ಎಚ್.ಜೆ. ಅಣ್ಣಪ್ಪ ಹೇಳಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿ ಸಹಾಯಕ ನಿರ್ದೇಶಕರಾದ ಶಶಿರೇಖಾ, ಮಮತಾ ತರಬೇತಿ ನೀಡಿದರು.

ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಎನ್. ರವಿಕುಮಾರ್, ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ವಿಭಾಗದ ಇಇ ಕೆ.ಎಂ. ಕೃಷ್ಣ, ಪಂ.ರಾಜ್ ಇಂಜಿನಿಯರಿಂಗ್ ವಿಭಾಗದ ಇಇ ಹನುಮಂತಪ್ಪ, ತೋಟಗಾರಿಕೆ ಉಪ ನಿರ್ದೇಶಕ ಎಸ್.ಬಿ.ಬೋಗಿ, ಜಿಲ್ಲಾ ಅಂತರ್ಜಲ ನಿರ್ದೇಶನಾಲಯದ ಹಿರಿಯ ಭೂ ವಿಜ್ಞಾನಿ ಬಸಂತ್, ಭದ್ರಾ ಮೇಲ್ದಂಡೆ ಯೋಜನೆ ಎಇಇ ಮಂಜುನಾಥ್ ಮತ್ತಿತರರು ಇದ್ದರು.

(ಸಿಟಿಡಿ 19 ಸಿಇಒ)

ಚಿತ್ರದುರ್ಗದಲ್ಲಿ ಗುರುವಾರ ಏರ್ಪಡಿಸಿದ್ದ ಸಣ್ಣ ನೀರಾವರಿ,ನೀರಿನಾಸರೆ ಗಣತಿ ತರಬೇತಿ ಕಾರ್ಯಾಗಾರವನ್ನು ಜಿಪಂ ಸಿಇಒ ಎಸ್.ಜೆ. ಸೋಮಶೇಖರ್ ಉದ್ಘಾಟಿಸಿದರು. ಎಡಿಸಿ ಬಿ.ಟಿ. ಕುಮಾರಸ್ವಾಮಿ, ಎನ್. ರವಿಕುಮಾರ್, ಕೆ.ಎಂ. ಕೃಷ್ಣ, ಹನುಮಂತಪ್ಪ, ಎಸ್.ಬಿ. ಬೋಗಿ, ಬಸಂತ್, ಮಂಜುನಾಥ್ ಇತರರಿದ್ದರು.