ವಿಜಯಪುರ: ಸಣ್ಣ ಕೈಗಾರಿಕೆಗಳು ಕೇವಲ ಬೆಂಗಳೂರು, ಮೈಸೂರಗಳಿಗಿಂತ ದೊಡ್ಡ ನಗರಗಳಲ್ಲಿ ಮಾತ್ರ ಸ್ಥಾಪನೆಯಾದರೆ ಸಾಲದು. ಉತ್ತರ ಕರ್ನಾಟಕ ಭಾಗದಲ್ಲಿ ಇಂಥ ಸಣ್ಣ ಕೈಗಾರಿಕೆಗಳು ಹೆಚ್ಚು ಸ್ಥಾಪನೆಯಾದರೆ, ಈ ಭಾಗದಲ್ಲಿ ಉದ್ಯೋಗ ಸೃಷ್ಟಿಯಾಗುತ್ತದೆ. ಜತೆಗೆ ಸರ್ಕಾರಕ್ಕೆ ಆದಾಯವೂ ಬರುತ್ತದೆ ಎಂದು ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.
ನಗರದ ಖಾಸಗಿ ಹೋಟೆಲ್‌ನಲ್ಲಿ ಸಿಡ್ಬಿ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಮತ್ತು ಕಾಸಿಯಾ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸೂಕ್ಷ್ಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಸವಲತ್ತುಗಳು ಹಾಗೂ ಹಣಕಾಸಿನ ನೆರವು ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರ ಪ್ರತಿ ಜಿಲ್ಲೆ ತಾಲೂಕು ಕೇಂದ್ರದಲ್ಲಿ ಸಣ್ಣ ಕೈಗಾರಿಕೆ ಉದ್ಯಮ ಅಭಿವೃದ್ಧಿಪಡಿಸಲು 50-100 ಹೇಕ್ಟರ್ ಪ್ರದೇಶವನ್ನು ಕಾಯ್ದಿರಿಸಬೇಕು. ಸಣ್ಣ ಉದ್ಯಮ ಸ್ಥಾಪನೆಗೆ ಮುಂದೆ ಬರುವ ಯುವಕರಿಗೆ ವಿವಿಧ ಬ್ಯಾಂಕ್‌ಗಳಲ್ಲಿ ಕಡಿಮೆ ಬಡ್ಡಿದರದಲ್ಲಿ ಸೌಲಭ್ಯ ದೊರೆಯುವಂತೆ ಮಾಡಬೇಕು. ಈ ಕುರಿತು ಉದ್ಯಮಿಗಳು ಸರ್ಕಾರದ ಮೇಲೆ ಒತ್ತಡ ಸಹ ಹೇರಬೇಕು ಎಂದರು.
ಜಿಲ್ಲೆ, ತಾಲೂಕು ಕೇಂದ್ರದಲ್ಲಿ ಸಣ್ಣ ಕೈಗಾರಿಕೆಗಳು ಸ್ಥಾಪನೆಯಾದರೆ ಹುಟ್ಟೂರಿನಲ್ಲಿಯೇ ಉದ್ಯೋಗವನ್ನು ಯುವಕರಿಗೆ ನೀಡಬಹುದು. ಅವರು ಅನಾವಶ್ಯಕವಾಗಿ ಮಹಾನಗರದಲ್ಲಿ ಉದ್ಯೋಗ ಅರಸಿ ಹೋಗುವುದನ್ನು ತಪ್ಪಿಸಬಹುದು ಎಂದರು.
ಬೃಹತ್ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಇದೇ ಜಿಲ್ಲೆಯವರಾಗಿರುವ ಕಾರಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕೈಗಾರಿಕೆಗಳನ್ನು ತಂದು, ಈ ಭಾಗದ ಜನರಿಗೆ ಉದ್ಯೋಗ ಸೃಷ್ಟಿ ಮಾಡುವ ಕೆಲಸ ಮಾಡಲಿದ್ದಾರೆ ಎನ್ನುವ ಭರವಸೆಯಿದೆ. ಇದರ ಜತೆ ಈ ಭಾಗದಲ್ಲಿ ಸಣ್ಣ ಕೈಗಾರಿಕೆಗಳಿಗೆ ಸಾಕಷ್ಟು ಅವಕಾಶವಿರುವ ಕಾರಣ ಮುಂದಿನ ದಿನಗಳಲ್ಲಿ ಉತ್ತರ ಕರ್ನಾಟಕಕ್ಕೆ ಸಾಕಷ್ಟು ಉದ್ಯಮಿಗಳು ಬರಲಿದ್ದಾರೆ ಎಂದು ವಿಶ್ವಾಸವ್ಯಕ್ತಪಡಿಸಿದರು.
ಬೆಂಗಳೂರಿನ ಪ್ರಾದೇಶಿಕ ಕಚೇರಿ ಸಿಡ್ಬಿಯ ಉಪಪ್ರಧಾನ ವ್ಯವಸ್ಥಾಪಕ ಬಿ. ಉಲಗಿಯನ್ ಮಾತನಾಡಿ, ಸಣ್ಣ ಅತಿಸಣ್ಣ ಕೈಗಾರಿಕೆಗಳನ್ನು ಸ್ಥಾಪಿಸಲು ಬ್ಯಾಂಕ್‌ಗಳಿಂದ ಯಾವ ರೀತಿ ಹಣಕಾಸಿನ ನೆರವು ಪಡೆದುಕೊಳ್ಳಬೇಕು. ತರಬೇತಿ ಪಡೆಯುವುದು ಹೇಗೆ ಎಂಬುದರ ಕುರಿತು ನೂತನ ಉದ್ಯಮಿಗಳಿಗೆ ಸಲಹೆ ನೀಡಿದರು.
ಆಹಾರ ಉತ್ಪಾದನಾ ಹಾಗೂ ಸಂಸ್ಕರಣ ಘಟಕದ ಸೀನಿಯರ್ ಟೆಕ್ನಿಕಲ್ ಆಫೀಸರ್ ರಾಘವೇಂದ್ರ ಮಾತನಾಡಿ, ತುಮಕೂರಿನಲ್ಲಿ 110ಎಕರೆ ಪ್ರದೇಶದಲ್ಲಿ ಫುಡ್‌ಪಾರ್ಕ್ ನಿರ್ಮಿಸಲಾಗಿದ್ದು, ಒಂದೇ ಸೂರಿನಡಿ ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸರ್ಕಾರದಿಂದ ಸಿಗುವಂತಹ ಎಲ್ಲ ಸೌಲಭ್ಯಗಳ ಕುರಿತು ನುರಿತ ಅಧಿಕಾರಿಗಳಿಂದ ಉಚಿತ ತರಬೇತಿಗಳನ್ನು ನೀಡಲಾಗುತ್ತಿದೆ. ಉದ್ದಿಮೆದಾರರ ಹೆಚ್ಚು ಉತ್ಪಾದನೆ ಕಡೆಗೆ ಹೆಚ್ಚಿನ ಗಮನಹರಿಸಲು ಇದು ಸಹಕಾರಿಯಾಗಲಿದೆ ಎಂದರು.
ಉದ್ಯಮಿ ಎಸ್.ಬಿ. ಪಾಟೀಲ ಮಾತನಾಡಿ, ನಗರದಲ್ಲಿ ಔದ್ಯೋಗಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಸರ್ಕಾರದಿಂದ ಸಹಾಯ ಸಹಕಾರ ನೀಡಬೇಕು. ಅದರೊಂದಿಗೆ ಮೂಲ ಸೌಕರ್ಯಗಳನ್ನೂ ಕೂಡ ಒದಗಿಸುವಂತಾಗಬೇಕು ಎಂದರು.
ವಾಣಿಜ್ಯ ಇಲಾಖೆ ಸಹಾಯಕ ಆಯುಕ್ತ ನಿಂಗಣ್ಣವರ, ತೆರಿಗೆಗಳನ್ನು ಬಳಸುವ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ಬೆಂಗಳೂರು ಪ್ರಾದೇಶಿಕ ಕಚೇರಿ ಗೌರವ ಪ್ರಧಾನ ಕಾರ್ಯದರ್ಶಿ ಎಸ್. ನಾಗರಾಜ, ಕಾಸಿಯಾದ ಜಿಎಸ್‌ಟಿ ಪ್ಯಾನಲ್ ಚೇರ್ಮನ್ ಉಮಾಶಂಕರ, ಜಿಲ್ಲಾ ಕೈಗಾರಿಕಾ ಜಂಟಿ ನಿರ್ದೇಶಕ ಪ್ರಶಾಂತ ಬಾರಿಗಿಡದ, ಉಪಾಧ್ಯಕ್ಷ ಎಂ.ಜಿ. ರಾಜಗೋಪಾಲ, ಗ್ರಾಮೀಣ ಜಂಟಿ ಕಾರ್ಯದರ್ಶಿ ಅರುಣ ಪಡಿಯಾರ, ಖಜಾಂಚಿ ಎಚ್.ಕೆ. ಮಲ್ಲೇಶಗೌಡ, ನಿಂಗಣ್ಣ ಬಿರಾದಾರ, ಕಿರಣಕುಮಾರ, ಗಂಗಾಧರ ಸಂಬಣ್ಣಿ ಇತರರಿದ್ದರು. ಕಾಸಿಯಾದ ಅಧ್ಯಕ್ಷ ಶಶಿಧರ ಶೆಟ್ಟಿ ಸ್ವಾಗತಿಸಿದರು.