ಜಿಲ್ಲೆ

ಸಣ್ಣ ಉದ್ದಿಮೆಗಳತ್ತ ಮಹಿಳೆಯರು ಗಮನಹರಿಸಿ

ಚಿತ್ರದುರ್ಗ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವ-ಸಹಾಯ ಗುಂಪುಗಳ ಮೂಲಕ ಮಹಿಳೆಯರು ಸಣ್ಣ ಉದ್ದಿಮೆಗಳನ್ನು ಸ್ಥಾಪಿಸಲು ಸಹಾಯಧನ ಹಾಗೂ ಸಬ್ಸಿಡಿ ನೀಡಲಾಗುತ್ತಿದೆ ಎಂದು ಜಿಪಂ ಉಪಕಾರ್ಯದರ್ಶಿ ಡಾ.ರಂಗಸ್ವಾಮಿ ಹೇಳಿದರು.

ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನೇತೃತ್ವದಲ್ಲಿ ಜಿಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಡಿಎಲ್‌ಆರ್‌ಸಿ ಹಾಗೂ ಡಿಸಿಸಿ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.

ಗೃಹಲಕ್ಷ್ಮೀ ಯೋಜನೆಯ ಅರ್ಹ ಫಲಾನುಭವಿಗಳನ್ನು ಸ್ವ-ಸಹಾಯ ಗುಂಪು (ಎಸ್‌ಎಚ್‌ಜಿ)ಗಳ ವ್ಯಾಪ್ತಿಗೆ ತಂದು ವಿಮಾ ಯೋಜನಗಳಾದ ಪಿಎಂಜೆಜೆವೈ, ಪಿಎಂಎಸ್‌ಬಿವೈ ಹಾಗೂ ಅಟಲ್ ಪಿಂಚಣಿ ಯೋಜನೆ (ಎಪಿವೈ) ಅಡಿಯಲ್ಲಿ ನೋಂದಾಯಿಸಲಾಗುವುದು ಎಂದು ತಿಳಿಸಿದರು.

ಎನ್‌ಆರ್‌ಎಲ್‌ಎಂ ಅಡಿ ಎಸ್‌ಎಚ್‌ಜಿ ಗುಂಪುಗಳಿಗೆ ಸಾಲ ಸೌಲಭ್ಯ ನೀಡಲಾಗುತ್ತಿದೆ. ಈ ಗುಂಪುಗಳನ್ನು ಬ್ಯಾಂಕ್‌ಗಳೊಂದಿಗೆ ಜೋಡಿಸಿ, ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳುವಂತೆ ಮಾಡಲು, ಮಹಿಳೆಯರ ಆರ್ಥಿಕ ಸಾಕ್ಷರತೆಯನ್ನು ಹೆಚ್ಚಿಸುವ ದೃಷ್ಟಿಯಿಂದ 184 ಬ್ಯಾಂಕ್ ಸಖಿಯರಿಗೆ ತರಬೇತಿ ನೀಡಲಾಗಿದೆ. ಸದ್ಯ 10 ಮಂದಿಯನ್ನು ನೇಮಿಸಲಾಗಿದೆ. ಮುಂದಿನ ಹಂತದಲ್ಲಿ ಜಿಲ್ಲೆಯ ಎಲ್ಲ ಗ್ರಾಪಂ ವ್ಯಾಪ್ತಿಯಲ್ಲಿನ ಬ್ಯಾಂಕ್‌ಗಳಿಗೆ ಸಖಿಯರನ್ನು ನೇಮಿಸಲಾಗುವುದು ಎಂದು ಹೇಳಿದರು.

ಮೈಕ್ರೋ ಫೈನಾನ್ಸ್‌ಗಳಲ್ಲಿ ಹೆಚ್ಚಿನ ಬಡ್ಡಿಗೆ ಮಹಿಳೆಯರು ಸಾಲ ಪಡೆಯುವ ಬದಲು, ಎಸ್‌ಎಚ್‌ಜಿ ಮೂಲಕ ಸಾಲ ಪಡೆದು ಉದ್ದಿಮೆ ನಡೆಸಿ ಆರ್ಥಿಕವಾಗಿ ಸಬಲರಾಗಲು ಅವಕಾಶವಿದೆ ಎಂದರು.

ಜಿಲ್ಲಾದ್ಯಂತ 13 ಸಾವಿರಕ್ಕೂ ಅಧಿಕ ಎಸ್‌ಎಚ್‌ಜಿಗಳಿದ್ದು, ಕೇವಲ 144 ಎಸ್‌ಎಚ್‌ಜಿಗಳು ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡದೆ ಅನುತ್ಪಾದಕ ಎನಿಸಿವೆ. ಈ ಪ್ರಮಾಣ ಬೇರೆ ಸಾಲ ವ್ಯವಹಾರಗಳಿಗೆ ಹೋಲಿಸಿದರೆ ನಗಣ್ಯ ಎನಿಸುವಷ್ಟಿದೆ. ಆದ್ದರಿಂದ ಎನ್‌ಆರ್‌ಎಲ್‌ಎಂ ಮೂಲಕ ಪುನಃ ಕ್ರೀಯಾಶೀಲವಾಗಿಸಿ ಬ್ಯಾಂಕುಗಳ ಸಾಲ ಮರುಪಾತಿಗೆ ಪ್ರಯತ್ನಿಸಲಾಗುವುದು ಎಂದು ತಿಳಿಸಿದರು.

ಜಿಪಂ ಕಾರ್ಯಕ್ರಮ ಅನುಷ್ಠಾನಾಧಿಕಾರಿ ಯೋಗೀಶ್ ಮಾತನಾಡಿ, 2024-25ನೇ ಸಾಲಿನಲ್ಲಿ 2,423 ಎಸ್‌ಎಚ್‌ಜಿಗಳಿಗೆ ಸಾಲ ಸೌಲಭ್ಯ ನೀಡಿ ಶೇ. 100ರಷ್ಟು ಗುರಿ ಸಾಧಿಸಲಾಗಿದೆ. 2025-26ನೇ ಸಾಲಿಗೆ 6,766 ಎಸ್‌ಎಚ್‌ಜಿಗಳಿಗೆ ಸಾಲ ಸೌಲಭ್ಯದ ಗುರಿ ನಿಗದಿ ಪಡಿಸಲಾಗಿದೆ. ಈ ಪೈಕಿ 225ಕ್ಕೆ ಈಗಾಗಲೇ ಸಾಲ ನೀಡಲಾಗಿದೆ ಎಂದರು.

ಎಸ್‌ಎಚ್‌ಜಿ ಎಲ್ಲ ಸದಸ್ಯರ ಆಧಾರ್ ಹಾಗೂ ಇತರೆ ವಿವರಗಳನ್ನು ಸಂಗ್ರಹಿಸಿ ಎನ್‌ಆರ್‌ಎಲ್ಎಂಎಂಐಎಸ್ ವೆಬ್‌ಸೈಟ್‌ನಲ್ಲಿ ಅಳವಡಿಸಲಾಗಿದ್ದು, ಬ್ಯಾಂಕ್‌ಗಳು ಈ ಮಾಹಿತಿ ಪಡೆದು ನಿರಾತಂಕವಾಗಿ ಸಾಲ ಮಂಜೂರು ಮಾಡಬಹುದು ಎಂದು ಮಾಹಿತಿ ನೀಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಎಂ.ರಾಘವೇಂದ್ರ ಮಾತನಾಡಿ, ಜಿಲ್ಲೆಯಲ್ಲಿ 16,59,456 ಜನಸಂಖ್ಯೆ ಇದ್ದು, ಪಿಎಂಜೆಜೆವೈ ಅಡಿ 2,05,924, ಪಿಎಂಎಸ್‌ಬಿವೈ ಅಡಿ 4,99,155 ಹಾಗೂ ಎಪಿವೈ ಅಡಿ 1,14,161 ಫಲಾನುಭವಿಗಳು ನೋಂದಣಿಯಾಗಿದ್ದಾರೆ. ಇನ್ನೂ ಸಾಕಷ್ಟು ಮಂದಿಯನ್ನು ನೋಂದಾಯಿಸಲು ಅವಕಾಶವಿದೆ ಎಂದರು.

ಸಾಲದ ಕಂತಿಗೆ ವಜಾ ಮಾಡಿಕೊಳ್ಳಬೇಡಿ: ಆರ್ಥಿಕತೆ ಒಳಗೊಳ್ಳುವಿಕೆ ಮಟ್ಟ ಹೆಚ್ಚಿಸಲು ಜುಲೈ 1ರಿಂದ ಸೆಪ್ಟೆಂಬರ್ 30ರವರೆಗೆ ಜಿಲ್ಲೆಯ ಎಲ್ಲ ಗ್ರಾಪಂಗಳಲ್ಲೂ ಲೀಡ್ ಬ್ಯಾಂಕ್‌ನಿಂದ ಆಂದೋಲನ ಹಮ್ಮಿಕೊಳ್ಳಲಾಗಿದೆ. ಈ ವೇಳೆ ಹೆಚ್ಚಿನ ನೋಂದಣಿಗೆ ಶ್ರಮ ವಹಿಸಬೇಕು. ಬ್ಯಾಂಕುಗಳು ಯಾವ ಕಾರಣಕ್ಕೂ ಸಾಮಾಜಿಕ ಭದ್ರತಾ ಯೋಜನೆಯಡಿ ಫಲಾನುಭವಿಗಳ ಖಾತೆಗೆ ಜಮೆಯಾಗುವ ಹಣವನ್ನು ಸಾಲದ ಕಂತಿಗೆ ವಜಾ ಮಾಡಿಕೊಳ್ಳಬಾರದು ಎಂದು ಸೂಚಿಸಿದರು.

ಕೃಷಿ, ಶಿಕ್ಷಣ, ವಸತಿ, ಸಣ್ಣ ಹಾಗೂ ಅತಿಸಣ್ಣ ಉದ್ದಿಮೆ ಹಾಗೂ ಇತರೆ ಸರ್ಕಾರದ ಯೋಜನೆಗಳಡಿ ಸಬ್ಸಿಡಿಯೊಂದಿಗೆ ಹೆಚ್ಚು ಸಾಲ ಸೌಲಭ್ಯಗಳನ್ನು ನೀಡಲು ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು.

ಆರ್‌ಬಿಐ ಪ್ರಬಂಧಕ ಅರುಣ್‌ಕುಮಾರ್ ಮಾತನಾಡಿ, ಜಿಲ್ಲಾದ್ಯಂತ 257 ಬ್ಯಾಂಕ್ ಶಾಖೆಗಳು ಕಾರ್ಯನಿರ್ವಹಿಸುತ್ತಿದ್ದು, 11,193.42 ಕೋಟಿ ರೂ. ಠೇವಣಿ ಸ್ವೀಕರಿಸಲಾಗಿದ್ದು, ಬ್ಯಾಂಕ್‌ಗಳು 12,596.51 ಕೋಟಿ ರೂ. ಸಾಲವನ್ನು ಸಾರ್ವಜನಿಕರಿಗೆ ನೀಡಿವೆ. ಜಿಲ್ಲೆಯಲ್ಲಿ ಸಾಲ-ಠೇವಣಿ ಅನುಪಾತ ಪ್ರತಿಶತ ಶೇ. 112.53 ರಷ್ಟಿದೆ ಎಂದು ತಿಳಿಸಿದರು.

ಬ್ಯಾಂಕ್‌ಗಳು ಸರ್ಕಾರ ಹಾಗೂ ನಿಗಮ ಮಂಡಳಿಗಳ ಸಾಲ ಸೌಲಭ್ಯ ಯೋಜನೆಗಳನ್ನು ಕಾಲಮಿತಿಯಲ್ಲಿ ಮಂಜೂರು ಮಾಡಬೇಕು ಎಂದರು.

ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಮಾತನಾಡಿ, ಪಿಎಂಎಫ್‌ಎಂಇ ಯೋಜನೆಯಡಿ ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 100 ಘಟಕಗಳ ಗುರಿ ನಿಗದಿಯಾಗಿದೆ. ಇದರಲ್ಲಿ 88 ಅರ್ಜಿ ಸ್ವೀಕೃತವಾಗಿವೆ. 50 ಅರ್ಜಿಗಳಿಗೆ ಬ್ಯಾಂಕ್‌ನಿಂದ ಸಾಲ ಸೌಲಭ್ಯ ದೊರಕಿದೆ. 30 ಅರ್ಜಿಗಳ ಮಂಜೂರಾತಿ ಬಾಕಿ ಇದೆ. ಘಟಕ ವೆಚ್ಚಕ್ಕೆ ಪಡೆಯುವ ಸಾಲ ಸೌಲಭ್ಯ ಸಂಬಂಧದ ಶೇ. 35ರಷ್ಟು ಸಬ್ಸಿಡಿಯನ್ನು ನೀಡಲಾಗುತ್ತದೆ. ಬಾಕಿ ಅರ್ಜಿಗಳನ್ನು ಬ್ಯಾಂಕ್ ಅಧಿಕಾರಿಗಳು ವಿಲೇವಾರಿ ಮಾಡುವಂತೆ ಮನವಿ ಮಾಡಿದರು.

ಕೆನರಾ ಬ್ಯಾಂಕ್ ವಲಯ ಪ್ರಬಂಧಕಿ ಅನಿತಾ, ನಬಾರ್ಡ್ ಜಿಲ್ಲಾ ವ್ಯವಸ್ಥಾಪಕ ಕೆ.ವಿನಂತ್, ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್ ಪ್ರಬಂಧಕ ಜನಾರ್ಧನ್ ಸೇರಿ ವಿವಿಧ ಬ್ಯಾಂಕ್‌ಗಳ ಅಧಿಕಾರಿಗಳಿದ್ದರು.