ಬಸವಕಲ್ಯಾಣ: ಇಲ್ಲಿನ ಸಸ್ತಾಪೂರ ಬಂಗ್ಲಾ ಬಳಿಯ ಅಗಲಿದ ಶಾಸಕ ಬಿ.ನಾರಾಯಣರಾವ ಅವರ ಸಮಾಧಿ ಸ್ಥಳಕ್ಕೆ ಭಾನುವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದರು. ಅಲ್ಲಿ ಆಯೋಜಿಸಿದ್ದ ಶೃದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಸಂದರ್ಭದಲ್ಲೇ ಸಿದ್ದರಾಮಯ್ಯ ಅವರ ಲುಂಗಿ (ಪಂಚೆ) ಸಡಿಲಗೊಂಡ ಪರಿಣಾಮ ಮತ್ತೆ ಮುಖ್ಯಮಂತ್ರಿ ಆಗುವ ವಿಷಯ ಚರ್ಚೆಗೆ ಬಂದ ಹಾಸ್ಯಮಯ ಪ್ರಸಂಗ ಇಲ್ಲಿ ನಡೆಯಿತು.
ದಿ. ಬಿ.ನಾರಾಯಣರಾವ ಶೃದ್ಧಾಂಜಲಿ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡುತ್ತಿರುವಾಗಲೇ ಅವರ ಲುಂಗಿ ಸಡಿಲಗೊಂಡಿತು. ಲುಂಗಿ ಜಾರುವ ಸಾಧ್ಯತೆಗಳಿರುವುದನ್ನು ಕಂಡ ನಗರ ಠಾಣೆ ಪಿಎಸ್ಐ ಗುರು ಪಾಟೀಲ್ ಅವರು ವೇದಿಕೆಗೆ ಹೋಗಿ, ಹುಮನಾಬಾದ್ ಶಾಸಕ ರಾಜಶೇಖರ ಪಾಟೀಲ್ ಅವರಿಗೆ ಈ ವಿಷಯ ಮುಟ್ಟಿಸಿದರು. ತಕ್ಷಣ ಶಾಸಕರು ಇದನ್ನು ಸಿದ್ದರಾಮಯ್ಯ ಅವರ ಗಮನಕ್ಕೆ ತಂದರು. ಆಗ ಸಿದ್ದರಾಮಯ್ಯ ಅವರು ಲುಂಗಿ ಬಿಗಿಯಾಗಿ ಕಟ್ಟಿಕೊಳ್ಳುತ್ತಲೇ ಮಾತು ಮುಂದುವರಿಸಿದರು. ಹೊಟ್ಟೆಗೆ ಹಸಿವಾಗಿದೆ ಅಂತ ಕಾಣಿಸುತ್ತಿದೆ. ಅದಕ್ಕಾಗಿ ಲುಂಗಿ ಸಡಿಲಗೊಂಡಂತಿದೆ ಎಂದು ಹಾಸ್ಯ ಚಟಾಕಿ ಹಾರಿಸಿದರು. ಈ ವೇಳೆ ವೇದಿಕೆಯಲ್ಲಿ ಕುಳಿತಿದ್ದ ಕೆಲ ಮುಖಂಡರು, ಲುಂಗಿ ಕಳಚುತ್ತಿರುವುದು ಒಳ್ಳೆಯ ಸಂಕೇತ ಸರ್ ಎಂದರು. ಮುಂದೆ ನೀವು ಮತ್ತೆ ಮುಖ್ಯಮಂತ್ರಿಗಳಾಗಬಹುದು ಎಂದೂ ಹೇಳಿದರು. ಆಗ ಮಾತನಾಡಿದ ಸಿದ್ದರಾಮಯ್ಯ ಅವರು ಏ ಹಾಗೆಲ್ಲ ಹೇಳಭ್ಯಾಡ್ರಪ್ಪಾ, ಇದನ್ನು ಕೇಳಿಸಿಕೊಳ್ಳುವವರಿಗೆ ನೋವಾಗುತ್ತದೆ. ಅದೆಲ್ಲ ಮುಂದೆ ಸಮಯ ಬಂದಾಗ ಜನ ಏನ್ ತೀರ್ಮಾನ ಮಾಡ್ತಾರೆ ಅಂತ ನೋಡೋಣ ಎಂದು ಹೇಳಿ ಚರ್ಚೆಗೆ ತೆರೆ ಎಳೆದರು. ಆದರೆ ಪಂಚೆ ಸಡಿಲದ ಚರ್ಚೆಯ ಪಂಚ್ ಮಾತ್ರ ವಿಶೇಷವಾಗಿತ್ತು.