ನಾಗಮಂಗಲ: ಲಿಂಗಸ್ವರೂಪಿ ಶಿವನ ಕ್ಷೇತ್ರವೆಂದೇ ಪ್ರಸಿದ್ಧ್ದವಾದ ತಾಲೂಕಿನ ಮೈಲಾರಪಟ್ಟಣದ ಶ್ರೀ ಮೈಲಾರಲಿಂಗೇಶ್ವರಸ್ವಾಮಿ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಂಗಳವಾರ ಸಂಭ್ರಮದಿಂದ ಜರುಗಿತು.
ಬೆಳಗ್ಗೆಯಿಂದ ಮೂಲ ವಿಗ್ರಹಕ್ಕೆ ಕ್ಷೀರಾಭಿಷೇಕದೊಂದಿಗೆ ವಿಶೇಷ ಅಲಂಕಾರ, ಮಹಾಮಂಗಳಾರತಿ, ಹೋಮ-ಹವನ, ಪೂರ್ಣಾಹುತಿ ನಡೆಯಿತು. ಹರಕೆ ಹೊತ್ತ ಭಕ್ತರಿಂದ ಬಾಯಿಬೀಗ ಸೇವೆ ನೆರವೇರಿತು.
ಸರಪಳಿ ಪವಾಡ ಬಳಿಕ ನಂದಿಕಂಬ, ವೀರಗಾಸೆ ಮತ್ತು ಗೊರವನ ಕುಣಿತದೊಂದಿಗೆ ಉತ್ಸವಮೂರ್ತಿಯ ರಥದ ಪೀಠಾರೋಹಣ ನೆರವೇರಿಸಲಾಯಿತು. ರಥದ ಗಾಲಿಗಳಿಗೆ ಬಲಿಪೂಜೆಯಾಗುತ್ತಿದ್ದಂತೆ ರಥೋತ್ಸವಕ್ಕೆ ಚಾಲನೆ ದೊರೆಯಿತು. ಭಕ್ತರು ಮೈಲಾರಲಿಂಗೇಶ್ವರನಿಗೆ ಉಘೆ-ಉಘೆ ಎನ್ನುತ್ತಾ ರಥವನ್ನು ಎಳೆದರು. ಹಣ್ಣು-ದವನ ಎಸೆದು ನಮಿಸಿದರು.
ಸರಪಳಿ ಪವಾಡ ವಿಶೇಷತೆ: ಸಂಪ್ರದಾಯದಂತೆ ದೇವಾಲಯ ಮುಂಭಾಗದಲ್ಲಿನ ನಂದಿ ಕಂಬಕ್ಕೆ ಕಟ್ಟಲಾದ ಕಬ್ಬಿಣದ ಸರಪಳಿಯನ್ನು ಜಗ್ಗಿಸಿ ಎಳೆಯುವಾಗ ಸರಪಳಿಯ ಸೇತುಬಂಧದ ಬೆಸುಗೆ ಬಾಯಿ ಬಿಡಕೂಡದು. ಹಾಗೊಂದು ವೇಳೆ ಬಾಯಿಬಿಟ್ಟರೆ ಪಕ್ಕದಲ್ಲಿರುವ ಅಕ್ಕಸಾಲಿಗ(ವಿಶ್ವಕರ್ಮ ಸಮುದಾದವರು) ತಕ್ಷಣ ಬಾಯಿಬಿಟ್ಟ ಸರಪಳಿಯನ್ನು ಬೆಸುಗೆ ಹಾಕುವ ಮೂಲಕ ಗಟ್ಟಿಗೊಳಿಸುತ್ತಾರೆ. ಭಕ್ತರ ಜಯ ಘೋಷದೊಂದಿಗೆ ಜಗ್ಗಿಸಿ ಎಳೆಯುವ ಸರಪಳಿ ತುಂಡಾದ ನಂತರವೇ ಗರ್ಭಗುಡಿಯಿಂದ ಉತ್ಸವಮೂರ್ತಿಯನ್ನು ಹೊರ ತರಲಾಗುವುದು. ಸರಪಳಿ ತುಂಡಾಗದಿದ್ದರೆ ರಥೋತ್ಸವಕ್ಕೆ ಚಾಲನೆ ದೊರೆಯದು. ಇದು ಇಲ್ಲಿನ ಜಾತ್ರಾ ಮಹೋತ್ಸವದ ವಿಶೇಷತೆ. ಈ ಸಂಪ್ರದಾಯವನ್ನು ನಿರಂತರಾಗಿ ಪಾಲಿಸಿಕೊಂಡು ಬರಲಾಗುತ್ತಿದೆ.