ಜಿಲ್ಲೆ

ಸಡಗರದ ಕೊಳಲು ಗೋಪಾಲ ಕೃಷ್ಣಸ್ವಾಮಿ ರಥೋತ್ಸವ

Hassan

ಅರಕಲಗೂಡು: ತಾಲೂಕಿನ ಕೊಣನೂರು ಶ್ರೀ ಕೊಳಲು ಗೋಪಾಲ ಕೃಷ್ಣಸ್ವಾಮಿ ರಥೋತ್ಸವ ಶುಕ್ರವಾರ ಭಕ್ತರ ಸಮ್ಮುಖದಲ್ಲಿ ಸಡಗರದಿಂದ ನೆರವೇರಿತು.


ದೇಗುಲದಲ್ಲಿ ಬೆಳಗ್ಗೆ ಕೊಳಲು ಗೋಪಾಲ ಕೃಷ್ಣಸ್ವಾಮಿಗೆ ಪುಣ್ಯಾಹವಾಚನ, ಪಂಚಾಮೃತ ಅಭಿಷೇಕ, ವಿಶ್ವಕ್ಷೇನಾ ಆರಾಧನೆ, ವಿಶೇಷ ಪುಷ್ಪಾಲಂಕಾರ, ನಿತ್ಯಬಲಿ, ನಿತ್ಯಹೋಮ ನಡೆದವು. ನಂತರ ದೇವರ ಉತ್ಸವ ಮೂರ್ತಿಯನ್ನು ಮೆರವಣಿಗೆಯಲ್ಲಿ ರಥದ ಬಳಿ ಕರೆತಂದು ರಥಾಂಗಹೋಮ, ರಥಬಲಿ, ರಥಸಂಪ್ರೋಕ್ಷ, ನಿತ್ಯ ಶ್ರೀ ಕೃಷ್ಣ ಗಂಧೋತ್ಸವ ಸೇವೆ ನೆರವೇರಿಸಲಾಯಿತು. ಮಧ್ಯಾಹ್ನ ಶಿರಸ್ತೇದಾರ್ ಸಿ.ಸ್ವಾಮಿ ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ಭಕ್ತರು ರಥವನ್ನು ಎಳೆದರು.


ರಥದೊಂದಿಗೆ ಪೂಜಾ ಕುಣಿತ, ಚಂಡೆವಾದ್ಯ, ವಿವಿಧ ದೇವರ ಕುಣಿತ ಪ್ರಕಾರಗಳು ಮನಸೆಳೆದವು. ಭಕ್ತರು ರಥಕ್ಕೆ ಹಣ್ಣು-ಧವನ ಎಸೆದರು. ನಂತರ ದೇವರ ದರ್ಶನ ಪಡೆದರು.


ಉಪ ತಹಸೀಲ್ದಾರ್ ಕುಮಾರ್, ಕಂದಾಯ ನಿರೀಕ್ಷಕ ಪ್ರವೀಣ್, ಗ್ರಾಪಂ ಅಧ್ಯಕ್ಷೆ ಮಿಸ್ಬಾ ರಿಜ್ವಾನ್, ಉಪಾಧ್ಯಕ್ಷೆ ಜಯಮ್ಮ, ಶಾಸಕ ಎ.ಟಿ.ರಾಮಸ್ವಾಮಿ ಪತ್ನಿ ಆಶಾರಾಣಿ, ಕಾಂಗ್ರೆಸ್ ಮುಖಂಡ ಡಾ.ದಿನೇಶ್ ಭೈರೇಗೌಡ, ಎಎಪಿ ಮುಖಂಡ ಬಿ.ಟಿ.ಜವರೇಗೌಡ ಪಾಲ್ಗೊಂಡಿದ್ದರು.