ಜಿಲ್ಲೆ

ಸಜ್ಜೆ ಬೆಳೆಗೆ ಕಾಡ್ತಿದೆ ಹಕ್ಕಿ ಕಾಟ

ಕೊಡೇಕಲ್ : ಮುಂಗಾರು ಹಂಗಾಮಿನ ಸಜ್ಜೆ ತೆನೆ ಕಟ್ಟಿ ಫಸಲು ಕೈಗೆ ಬರುವಷ್ಟರಲ್ಲಿ ಹಕ್ಕಿಗಳ ಕಾಟ ಹೆಚ್ಚಿರುವುದು ಕೃಷಿಕರು ನಿದ್ದೆಗೆಡುವಂತ ಮಾಡಿದೆ.
ಕೊಡೇಕಲ್ ಸೇರಿ ಹೋಬಳಿಯ ಬಹುತೇಕ ಕಡೆ ರೈತರು ಸಜ್ಜೆ ಬಿತ್ತನೆ ಮಾಡಿದ್ದಾರೆ. ಸಮೃದ್ಧವಾಗಿ ತೆನೆ ಬಿಡುತ್ತ ಕಾಳು ಕಟ್ಟುವ ಹಂತದಲ್ಲಿದೆ. ಆದರೆ ಒಂದು ವಾರದಿಂದ ಸಜ್ಜೆಗೆ ಹಕ್ಕಿಗಳ ಹಿಂಡು ಉಪಟಳ ನೀಡುತ್ತಿದೆ.

ಸಜ್ಜೆ ಬಿತ್ತಿದವರಿಗೆ ಬೆಳೆ ಸಾಥ್ ನೀಡಿದ್ದರೂ ಕಾಳು ಕಟ್ಟುವ ಹಂತದಲ್ಲಿ ಹಕ್ಕಿಗಳ ಕಾಟ ಕಿರಿಕಿರಿ ತಂದೊಡ್ಡಿದೆ. ಬೆಳಗ್ಗೆ ಮತ್ತು ಸಂಜೆ ಜಮೀನಿನಲ್ಲಿ ಹಕ್ಕಿಗಳ ಹಿಂಡು ತೆನೆಗಳ ಮೇಲೆ ಕುಳಿತು ಕಾಳು ಮುಕ್ಕುತ್ತಿರುವುದರಿಂದ ಓಡಿಸಲು ಕೃಷಿಕರು ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಹಕ್ಕಿಗಳು ಮಾತ್ರ ಕಾಳು ತಿಂದು ಪರ‍್ರೆಂದು ಹಾರಿ ಹೋಗುತ್ತಿರುವುದನ್ನು ನೋಡಿ ಕೈ ಕಟ್ಟಿ ಕುಳಿತುಕೊಳ್ಳುವಂತಾಗಿದೆ.

ಪ್ಲಾಸ್ಟಿಕ್ ಚೀಲಗಳ ಮೊರೆ: ಕೈಯಲ್ಲಿ ತಮಟೆ ಇಲ್ಲವೆ ಪಾತ್ರೆ ಮೂಲಕ ಜಮೀನಿನ ನಾಲ್ಕು ದಿಕ್ಕುಗಳಲ್ಲಿ ಶಬ್ದ ಮಾಡುತ್ತ ಹಕ್ಕಿಗಳನ್ನು ಓಡಿಸುವುದು ಇಲ್ಲವೆ ಬೆಳೆ ಮಧ್ಯೆ ಬಿದಿರು ಬೊಂಬೆಗಳನ್ನು ನಿಲ್ಲಿಸಿ ಹಕ್ಕಿಗಳು ಬಾರದಂತೆ ನಿಗಾ ವಹಿಸುತ್ತಿದ್ದಾರೆ. ಇನ್ನೂ ಕೆಲವರು ತೆನೆಗಳಿಗೆ ಪ್ಲಾಸ್ಟಿಕ್ ಕ್ಯಾರಿಬ್ಯಾಗ್‌ಗಳನ್ನು ಕಟ್ಟುವ ಮೂಲಕ ಹಕ್ಕಿಗಳಿಂದ ಫಸಲು ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.