ಬಾಗಲಕೋಟೆ: ಸದೃಢ ಪ್ರಜಾಪ್ರಭುತ್ವ ನಿರ್ಮಾಣದಲ್ಲಿ ಮತದಾನದ ಪಾತ್ರ ಅವಶ್ಯವಾಗಿದ್ದು, ಸಚ್ಯಾರಿತ್ರ‍್ಯವುಳ್ಳ ಜನಪ್ರತಿನಿಧಿಗೆ ಮತ ಚಲಾಯಿಸುವಂತೆ ಪ್ರಧಾನ ಜಿಲ್ಲಾ ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಸ್.ದೇಶಪಾಂಡೆ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿರುವ ಆಡಿಟೋರಿಯಂ ಹಾಲ್‌ನಲ್ಲಿ ಬುಧವಾರ ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ನ್ಯಾಯಾಂಗ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಽಕಾರ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜಾತಿ, ಧರ್ಮ ಬೇಧಗಳನ್ನು ಲೆಕ್ಕಿಸದೇ ನಿರ್ಭಯವಾಗಿ ತಮ್ಮ ಹಕ್ಕನ್ನು ಚಲಾಯಿಸಲು ಯುವಕರು ಮುಂದಾಗಬೇಕು. ಉತ್ತಮವಾದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಪ್ರಜಾಪ್ರಭುತ್ವದಲ್ಲಿ ಮತದಾನದ ಮೂಲಕ ಅವಕಾಶ ಕಲ್ಪಿಸಿದ್ದು, ಮತ ಚಲಾಯಿಸುವುದು ಪ್ರತಿಯೊಬ್ಬರ ಜವಾಬ್ದಾರಿ, ಹಕ್ಕು ಹಾಗೂ ಕರ್ತವ್ಯವಾಗಿದೆ. ದೇಶಕ್ಕೆ ಒಳ್ಳೆಯ ಆಡಳಿತವನ್ನು ತರಲು ಚುನಾವಣೆಯ ಮೂಲಕ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತಿದ್ದು, ಯುವ ಜನತೆ ಯಾವುದೇ ಆಸೆ, ಆಮೀಷಗಳಿಗೆ ಒಳಗಾಗದೇ ಮತದಾನದ ಮಹತ್ವವನ್ನು ಅರಿತು ತಮ್ಮ ಹಕ್ಕನ್ನು ಚಲಾಯಿಸಲು ಮುಂದಾಗಬೇಕು ಎಂದರು.
ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ, ಪ್ರಜಾಪ್ರಭುತ್ವದಲ್ಲಿ ತಮ್ಮ ಹಕ್ಕನ್ನು ಚಲಾಯಿಸಲು ಅವಕಾಶವಿದ್ದು. ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ ನಿರ್ಭಯದಿಂದ ಮತ ಚಲಾಯಿಸಲು ಮುಂದಾಗಬೇಕು. ವಿವಿಧ ಆಮಿಷಗಳನ್ನು ಒಡ್ಡಿ ಮತ ಕೇಳುವುದು ಸಹ ತಪ್ಪಾಗಿದ್ದು, ಮತವನ್ನು ಮಾರಾಟಕ್ಕೆ ಇಡದೇ ದೇಶದ ಅಭಿವೃದ್ಧ್ದಿಯ ದೃಷ್ಠಿಕೋನ ಇಟ್ಟುಕೊಂಡು ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಲು ಯುವ ಮತದಾರರು ತಮ್ಮ ಮತದಾನದ ಹಕ್ಕನ್ನು ತಪ್ಪದೇ ಚಲಾಯಿಸಲು ತಿಳಿಸಿದರು.
ಕಾರ್ಯಕ್ರಮದಲ್ಲಿ ಕುಟುಂಬ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಕೃಷ್ಣಕುಮಾರ ಪಡಸಲಗಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೇಮಾ ಪಸ್ತಾಪುರ, ಜಿ.ಪಂ ಸಿಇಒ ಟಿ.ಭೂಬಾಲನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಯಪ್ರಕಾಶ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ ದೇಸಾಯಿ, ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ,ಉಪವಿಭಾಗಾಽಕಾರಿ ಶ್ವೇತಾ ಬೀಡಿಕರ ತಹಸೀಲ್ದಾರ ವಿನಯ ಪಾಟೀಲ, ಚುನಾವಣಾ ತಹಸೀಲ್ದಾರ ಎಸ್.ಎಸ್.ನಾಯ್ಕಲಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು.