ಜಿಲ್ಲೆ

ಸಚಿವೆ ಶಶಿಕಲಾ ಜೊಲ್ಲೆ ಅಧಿಕಾರಿಗಳಿಗೆ ಹೇಳಿದ್ದೇನು..?

ಕಾರವಾರ:'ನಿಮ್ಮಲ್ಲಿಗೆ ಬರುವ ಜನರನ್ನು ಕುಳ್ಳಿರಿಸಿ ಮಾತನಾಡಿಸಿ. ಕಚೇರಿಯನ್ನು ಸ್ವಚ್ಛವಾಗಿಟ್ಟುಕೊಳ್ಳಿ' ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಜಿಲ್ಲೆಯ ವಿವಿಧ ಇಲಾಖೆ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ನಗರದ ಜಿಪಂ ಸಭಾ ಭವನದಲ್ಲಿ ಬುಧವಾರ ಕೆಡಿಪಿ ಸಭೆಯಲ್ಲಿ ಅವರು ಮಾತನಾಡಿದರು.

ಪೋನ್ ನಲ್ಲಿ ಮಾತನಾಡುತ್ತಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಕಡತಗಳ ವರದಿ ಬೇಡ. ಕ್ಷೇತ್ರಕ್ಕೆ ಇಳಿದು ಕಾರ್ಯ ನಿರ್ವಹಿಸಿ.‌ ಆಧುನಿಕ ತಂತ್ರಜ್ಞಾನ ಬಳಸಿ,‌ಜನ ಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಜಾಗೃತಿ ಮೂಡಿಸಿ. ವ್ಯಾಟ್ಸ್ ಆ್ಯಪ್ ಗ್ರುಪ್ ರೂಪಿಸಿಕೊಂಡು ಇಲಾಖೆ ಕಾರ್ಯಕ್ರಮಗಳ ಪ್ರಚಾರ ಮಾಡಿ ಎಂದು ಎಂದರು.

ಸೈಬರ್ ಕ್ರೈಂ ನಿಯಂತ್ರಿಸಿ:

ಜಿಲ್ಲೆಯಲ್ಲಿ ಸೈಬರ್ ಕ್ರೈಂ ಪ್ರಕರಣಗಳು ಹೆಚ್ಚಿವೆ ಕೇವಲ ಪೊಲೀಸ್ ಇಲಾಖೆಯಿಂದ ಅವುಗಳ ಬಗ್ಗೆ ಜಾಗೃತಿ ಸಾಧ್ಯವಿಲ್ಲ. ಇದರಿಂದ ಪ್ರತಿ ಗ್ರಾಮ ಸಭೆಯಲ್ಲಿ, ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಿ ಎಂದರು.

ಜಿಪಂ ಅಧ್ಯಕ್ಷೆ ಜಯಶ್ರೀ ಮೊಗೇರ, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಡಾ.ಹರೀಶ ಕುಮಾರ ಕೆ., ಜಿಪಂ ಸಿಇಒ ಎಂ. ರೋಶನ್, ಎಸ್ ಪಿ ಶಿವಪ್ರಕಾಶ ದೇವರಾಜು ಇದ್ದರು.