ಜಿಲ್ಲೆ

ಸಚಿವರಿಗೆ ಘೇರಾವ್ ಹಾಕಿ ಪ್ರತಿಭಟನಾಕಾರರ ಆಕ್ರೋಶ

reportermys

ಮೈಸೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಹಠಾತ್ ಪ್ರತಿಭಟನೆ ನಡೆಸಿದ ಏಕಲವ್ಯನಗರ ನಿವಾಸಿಗಳು, ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕಂಗಾಲದ ಪೊಲೀಸರು, ಹಸುಗೂಸು, ಚಿಕ್ಕಮಕ್ಕಳು, ಮಹಿಳೆಯರನ್ನೂ ಬಿಡದೆ 50ಕ್ಕೂ ಹೆಚ್ಚು ಜನರನ್ನು ಬಂಧಿಸಿ ಕರೆದೊಯ್ದರು.

ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಂಡಿದ್ದ ಮೆರವಣಿಗೆಗೆ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಮಂಗಳವಾರ ಚಾಲನೆ ನೀಡಿದ ಸಚಿವರು, ಕೂಗಳತೆ ದೂರದಲ್ಲಿರುವ ಡಾ.ರಾಜ್‌ಕುಮಾರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಹೊರಟರು. ಆಗ ಜಯಚಾಮರಾಜ ವೃತ್ತದಲ್ಲಿ ಪ್ರತಿಭಟನಾಕಾರರು ಸಚಿವರಿಗೆ ಘೇರಾವ್ ಹಾಕಿ ಘೋಷಣೆಗಳನ್ನು ಕೂಗಿದರು.

ಇದರಿಂದ ಗಲಿಬಿಲಿಗೊಂಡ ಸಚಿವರು, ಮಾಲಾರ್ಪಣೆ ಮಾಡದೆ ಅಲ್ಲಿಂದ ಕಾರು ಹತ್ತಿ ಹೊರಟು ಹೋದರು. ಆಗ ಇನ್ನಷ್ಟು ಕೆರಳಿದ ಪ್ರತಿಭಟನಾಕಾರರು ಮೆರವಣಿಗೆಗೆ ನುಗ್ಗಲು ಯತ್ನಿಸಿದರು. ಅವರನ್ನು ಪೊಲೀಸರು ತಡೆದು ನಿಲ್ಲಿಸಿದರು. ಪ್ರತಿಭಟನಾನಿರತ ಮಕ್ಕಳು, ಮಹಿಳೆಯರು ರಸ್ತೆಯಲ್ಲೇ ಕುಳಿತು ಘೋಷಣೆಗಳನ್ನು ಕೂಗಿದರು.


ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಮಾತನಾಡಿ, ಜಿಲ್ಲಾಧಿಕಾರಿ ಕಚೇರಿ ಎದುರು 50 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕೂ ನಮ್ಮ ಕಷ್ಟ ಕೇಳಲಿಲ್ಲ. ಮನವಿ ಕೊಡಲು ಹೋದರೂ ತಪ್ಪಿಸಿಕೊಂಡು ಓಡಾಡುತ್ತಿದ್ದಾರೆ ಎಂದು ದೂರಿದರು.

ಏಕಲವ್ಯನಗರದ ಅಲೆಮಾರಿ ಸಮುದಾಯದ ನಾಗರಿಕರಿಗೆ ಮನೆ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಪಂಜಿನ ಮೆರವಣಿಗೆ ನಡೆಸಿದೆವು. ನಾಡಹಬ್ಬ ದಸರಾ ಮಹೋತ್ಸವಕ್ಕೂ ಯಾವುದೇ ರೀತಿ ಅಡ್ಡಿಪಡಿಸಲಿಲ್ಲ. ಆದರೆ ದಸರಾ ಮುಗಿದ ಮೇಲಾದರೂ ನಮ್ಮ ಅಹವಾಲು ಕೇಳಲಿಲ್ಲ ಎಂದು ಆರೋಪಿಸಿದರು.

12 ವರ್ಷಗಳ ಹಿಂದೆ ಕರ್ನಾಟಕ ಕೊಳಚೆ ನಿರ್ಮೂಲನಾ ಮಂಡಳಿ ಜೆ-ನರ್ಮ್ ಯೋಜನೆಯಡಿ ಮನೆ ನಿರ್ಮಿಸಿಕೊಡುವುದಾಗಿ ಭರವಸೆ ನೀಡಿ ನಿವಾಸಿಗಳನ್ನು ಶ್ಯಾದನಹಳ್ಳಿ ಗೋಮಾಳಕ್ಕೆ ಸ್ಥಳಾಂತರಿಸಿತ್ತು. ಅದನ್ನು ಏಕಲವ್ಯನಗರವೆಂದು ಜಿಲ್ಲಾಡಳಿತ ಘೋಷಿಸಿದೆ. ಆದರೆ ಮನೆ ಹಕ್ಕುಪತ್ರ ನೀಡದೆ ಅಲೆಸುತ್ತಿದೆ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಪೊಲೀಸರು ಕಕ್ಕಾಬಿಕ್ಕಿ:
ದಿಢೀರ್ ಪ್ರತಿಭಟನೆಯಿಂದಾಗಿ ಅಧಿಕಾರಿಗಳು ಹಾಗೂ ಪೊಲೀಸರು ಕಕ್ಕಾಬಿಕ್ಕಿಯಾದರು. ಪರಿಸ್ಥಿತಿ ನಿಯಂತ್ರಿಸಲು ಪರದಾಡಿದರು. ಕೊನೆಗೆ ಮಕ್ಕಳು ಹಾಗೂ ಮಹಿಳೆಯರು ಸೇರಿದಂತೆ 50ಕ್ಕೂ ಹೆಚ್ಚು ಜನರನ್ನು ಬಂಧಿಸಲಾಯಿತು. ಮೂರು ವ್ಯಾನ್‌ಗಳಲ್ಲಿ ಅವರನ್ನು ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಲಾಯಿತು.

ಚಿಕ್ಕ ಮಕ್ಕಳನ್ನೂ ಬಿಡಲಿಲ್ಲ:
ಹಸುಗೂಸು, ಚಿಕ್ಕ ಮಕ್ಕಳನ್ನೂ ಬಿಡದೆ ಬಂಧಿಸಿ ವಾಹನದಲ್ಲಿ ತುಂಬಿಕೊಂಡು ಕರೆದೊಯ್ದ ಪೊಲೀಸರ ಕ್ರಮ ಆಕ್ರೋಶಕ್ಕೆ ಕಾರಣವಾಗಿದೆ. ಬಂಧನ ಮತ್ತು ವಾಹನದಲ್ಲಿ ಕರೆದೊಯ್ಯುವ ಸಂದರ್ಭದಲ್ಲಿ ಮಹಿಳಾ ಪೊಲೀಸರು ಸಹ ಇರಲಿಲ್ಲ.