ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ವಿಜಯಪುರದ ಗೃಹ ಕಚೇರಿಯಲ್ಲಿ ವಿವಿಧ ಗ್ರಾಮಗಳ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಮಲಘಾಣ ಗ್ರಾಮದ ಸುರೇಶ ಲಮಾಣಿ, ಮಹಾಂತೇಶ ಲಮಾಣಿ, ಶಂಕರ ಲಮಾಣಿ, ರವಿ ಲಮಾಣಿ, ಗಂಗಾಧರ ಬಿರಾದಾರ, ಬಾಬು ಲಿಂಬಾಜಿ, ಮಲ್ಲನಗೌಡ ಪಾಟೀಲ ಇತರರಿದ್ದರು. 
ಜಿಲ್ಲೆ

ಸಚಿವರಿಂದ ವಿವಿಧ ಗ್ರಾಮಸ್ಥರ ಅಹವಾಲು ಸ್ವೀಕಾರ

ವಿಜಯಪುರ: ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ತಮ್ಮ ಗೃಹ ಕಚೇರಿಯಲ್ಲಿ ಭಾನುವಾರ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.

ಸಚಿವರ ಗೃಹ ಕಚೇರಿಗೆ ಆಗಮಿಸಿದ ಬಬಲೇಶ್ವರ ಮತಕ್ಷೇತ್ರ ಮತ್ತು ಜಿಲ್ಲೆಯ ನಾನಾ ಭಾಗಗಳ, ಹೊರ ಜಿಲ್ಲೆಗಳ ಜನರು ವಿವಿಧ ಅಹವಾಲು ಸಲ್ಲಿಸಿದರು. ಕುಡಿಯುವ ನೀರು, ರಸ್ತೆ ಸೇರಿದಂತೆ ನಾನಾ ಸಮಸ್ಯೆಗಳ ಕುರಿತು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಸಚಿವರು, ಸಂಬಂಧಿಸಿದ ಅಧಿಕಾರಿಗಳಿಗೆ ಕರೆ ಮಾಡಿ ಕೂಡಲೇ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಸೂಚಿಸಿದರು.

ಜಾಲಗೇರಿ ಕೆರೆಗೆ ನೀರು ಸರಬರಾಜು ವಿಳಂಬವಾಗಿ ರೈತರು ಸಂಕಷ್ಟದಲ್ಲಿರುವುದನ್ನು ಗ್ರಾಮಸ್ಥರು ಗಮನ ಸೆಳೆದರು. ಆಗ, ಸಚಿವರು ಜಾಲಗೇರಿ ಕೆರೆಗೆ ಪ್ರತ್ಯೇಕವಾಗಿ ನೀರು ತುಂಬಿಸಲು ಕ್ರಮ ಕೈಗೊಳ್ಳುವಂತೆ ಸ್ಥಳದಲ್ಲಿ ಉಪಸ್ಥಿತರಿದ್ದ ಕೆಬಿಜೆಎನ್‌ಎಲ್ ಮುಖ್ಯ ಇಂಜಿನಿಯರ್ ಶ್ರೀನಿವಾಸ್, ಸೂಪರಿಂಡೆಂಟ್ ಇಂಜಿನಿಯರ್ ಜಗದೀಶ ರಾಠೋಡ ಅವರಿಗೆ ಸೂಚನೆ ನೀಡಿದರು.

ಸಚಿವರನ್ನು ಭೇಟಿ ಮಾಡಿದ ಬಸವನಬಾಗೇವಾಡಿ ತಾಲೂಕು ಮಲಘಾಣ ಗ್ರಾಮಸ್ಥರು, ಎಂ.ಬಿ. ಪಾಟೀಲ ಜಲಸಂಪನ್ಮೂಲ ಸಚಿವರಾಗಿದ್ದ ವೇಳೆ ತಮ್ಮ ಊರಿನ ಮಕಣಾಬಾಯಿ ದೇವಸ್ಥಾನದ ಸಮುದಾಯ ಭವನ ನಿರ್ಮಾಣಕ್ಕೆ ಕೆಬಿಜೆಎನ್‌ಎಲ್ ವತಿಯಿಂದ 25ಲಕ್ಷ ರೂ. ನೀಡಿದ್ದನ್ನು ನೆನಪಿಸಿದರು. ಅಲ್ಲದೇ, ಜೀರ್ಣೋದ್ಧಾರ ಮಾಡಲಾಗಿರುವ ಮಕಣಾಬಾಯಿ ದೇವಸ್ಥಾನದ ಉದ್ಘಾಟನಾ ಸಮಾರಂಭ ಸೆ. 7 ಮತ್ತು 8ರಂದು ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.

ಮಲಘಾಣ ಗ್ರಾಮದ ಮುಖಂಡರಾದ ಸುರೇಶ ಲಮಾಣಿ, ಮಹಾಂತೇಶ ಲಮಾಣಿ, ಶಂಕರ ಲಮಾಣಿ, ರವಿ ಲಮಾಣಿ, ಗಂಗಾಧರ ಬಿರಾದಾರ, ಬಾಬು ಲಿಂಬಾಜಿ, ಮಲ್ಲನಗೌಡ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಕರಾಡೆ ದೊಡ್ಡಿ, ಕಳ್ಳಕವಟಗಿ, ಅರಕೇರಿ ಸೇರಿದಂತೆ ನಾನಾ ಗ್ರಾಮಗಳಿಂದ ಆಗಮಿಸಿದ್ದ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸಿದ ಸಚಿವರು ಕೂಡಲೇ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ದೂರವಾಣಿ ಮೂಲಕ ತಿಳಿಸಿದರು.