ಜಿಲ್ಲೆ

ಸಚಿವರ ಮೌಲ್ಯಮಾಪನ ನಿರಂತರ ಪ್ರಕ್ರಿಯೆ

Dharwada - Santosh Vaidya

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ:

ಸಚಿವರ ಮೌಲ್ಯಮಾಪನ ನಿರಂತರ ಪ್ರಕ್ರಿಯೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ. ಈ ಬಗ್ಗೆ ನನಗೆ ಹೈಕಮಾಂಡ್​ನಿಂದಾಗಲಿ, ಕಾಂಗ್ರೆಸ್ ಶಾಸಕಾಂಗ ಪಕ್ಷ (ಸಿಎಲ್​ಪಿ)ದಿಂದಾಗಲಿ ನಿರ್ದೇಶನ ಬಂದಿಲ್ಲ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದರು.

ಹುಬ್ಬಳ್ಳಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಹಾಸನದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಅಭಿಮಾನಿಗಳು ಅವರ ಮೇಲಿನ ಅಭಿಮಾನಕ್ಕೆ ಹಾಗೂ ಪ್ರೀತಿಗಾಗಿ ಸಮಾವೇಶ ನಡೆಸುವುದರಲ್ಲಿ ತಪ್ಪೇನಿದೆ? ಮುಖ್ಯಮಂತ್ರಿಯವರ ಹಿಂಬಾಲಕರು ಹಾಗೂ ಅಭಿಮಾನಿಗಳು ಸ್ವಾಭಿಮಾನಿ ಸಮಾವೇಶ ಮಾಡುವುದು ಅವರವರ ವೈಯಕ್ತಿಕ ವಿಚಾರ. ಕೆಲವರು ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಆದರೆ ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳಿದರು.

ವಕ್ಪ್ ವಿಚಾರದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಕೊಟ್ಟಷ್ಟು ನೋಟಿಸ್ ಯಾರು ಕೊಟ್ಟಿಲ್ಲ. ಈ ಕುರಿತು ಅವರು ಏನು ಮಾತನಾಡುತ್ತಾರೆ ? ಏನು ಹೋರಾಟ ಮಾಡುತ್ತಾರೆ ? ಎಂಬುದನ್ನು ಅವರಿಗೆ ಕೇಳಬೇಕು. ರಾಜ್ಯದಲ್ಲಿ ಬಿಜೆಪಿ ಒಡೆದ ಮನೆ ಆಗಿದೆ. ಶಾಸಕ ಬಸನಗೌಡ ಪಾಟೀಲ ಪಕ್ಷದೊಳಗಿನ ತಪ್ಪು ಹೊರ ಹಾಕಿದ್ದಾರೆ. ಅವರು ವಾಸ್ತವಿಕ ಸ್ಥಿತಿಯನ್ನು ಹೇಳಿದ್ದಾರೆ ಎಂದರು.