ಮೈಸೂರು: ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮು ಅವರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರಲ್ಲಿ ಕ್ಷಮೆ ಕೋರಬೇಕು ಎಂದು ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಮಿರ್ಲೆ ಶ್ರೀನಿವಾಸಗೌಡ ಒತ್ತಾಯಿಸಿದರು.
ಎಫ್‌ಐಆರ್ ದಾಖಲಾದ ಮಾತ್ರಕ್ಕೆ ಅಪರಾಧಿ ಆಗುವುದಿಲ್ಲ. ಅಲ್ಲದೆ ಎಸ್.ಟಿ.ಸೋಮಶೇಖರ್ ಅವರು ಕೆಲವು ತಿಂಗಳು ಮಾತ್ರ ಬಿಡಿಎ ಅಧ್ಯಕ್ಷರಾಗಿದ್ದರು. ಅವರ ಅವಧಿಗಿಂತ ಮುಂಚೆ ನಡೆದಿರುವ ಆರೋಪವನ್ನು ಹೊರಿಸಿ ಆರನೇ ಆರೋಪಿಯನ್ನಾಗಿ ಮಾಡಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಿದ್ದರಾಮಯ್ಯ ಅವರನ್ನು ಓಲೈಕೆ ಮಾಡುವ ಸಲುವಾಗಿ ಇಂತಹ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ವಾಚ್ ಹಗರಣವಾದಾಗ, ವಿನಯ್‌ಕುಲಕರ್ಣಿ ವಿರುದ್ಧ ಕೊಲೆ ಆರೋಪ ಬಂದಾಗ ಯಾಕೆ ಅವರು ಮಾತನಾಡಲಿಲ್ಲ, ಯಾಕೆ ರಾಜೀನಾಮೆ ಕೇಳಲಿಲ್ಲ ಎಂದು ಪ್ರಶ್ನಿಸಿದರು.
ಕುಲಪತಿಯಾಗಿದ್ದ ಕೆ.ಎಸ್.ರಂಗಪ್ಪ ಸೇರಿದಂತೆ ಕೇವಲ ಒಕ್ಕಲಿಗ ನಾಯಕರ ವಿರುದ್ಧವೇ ಇವರು ಆರೋಪ ಮಾಡುತ್ತಿರುವುದು ದುರುದ್ದೇಶದಿಂದ ಕೂಡಿದೆ. ಇಂತಹ ಇಲ್ಲಸಲ್ಲದ ಆರೋಪ ಮಾಡುವುದನ್ನು ಬಿಟ್ಟು ಎಸ್.ಟಿ.ಸೋಮಶೇಖರ್ ಅವರಲ್ಲಿ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿದರು.