ಜಿಲ್ಲೆ

ಸಚಿವರ ಆಪ್ತನಿಂದಲೇ ಅಕ್ಕಿ ಅಕ್ರಮ ಸಾಗಣೆ

ಜಯತೀರ್ಥ ಪಾಟೀಲ

ಯಾದಗಿರಿ: ಸದಾ ಒಂದಿಲ್ಲೊಂದು ವಿಷಯದಲ್ಲಿ ಚರ್ಚೆಗೆ ಗ್ರಾಸವಾಗುತ್ತಿರುವ ಸದ್ಯ ಜೈಲಿನಲ್ಲಿರುವ ಬಿಜೆಪಿ ಯುವ ಮುಖಂಡ ಮಣಿಕಂಠ ರಾಠೋಡ್ ಬರೆದಿದ್ದು ಎನ್ನಲಾದ ಕೈಬರಹದ ಪತ್ರದಲ್ಲಿ ಅಕ್ಕಿ ಅಕ್ರಮ ಸಾಗಣೆಯನ್ನು ಜಿಲ್ಲೆಯ ಸಚಿವರೊಬ್ಬರು ತಮ್ಮ ಆಪ್ತನ ಮೂಲಕವೇ ಸಾಗಿಸಿದ್ದಾರೆ ಎಂದು ಆರೋಪಿಸಲಾಗಿದೆ. ಪತ್ರ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಾಲ್ಮೀಕಿ ನಿಗಮದ ಹಗರಣ ಬೆನ್ನಲ್ಲೇ ಸಚಿವರೊಬ್ಬರ ವಿರುದ್ಧ ಮಣಿಕಂಠ ಮಾಡಿದ ಆರೋಪ ಹೊಸ ತಿರುವು ಪಡೆದುಕೊಳ್ಳುವಂತಿದೆ. ಶಹಾಪುರ ಟಿಎಪಿಸಿಎಂಎಸ್ ಗೋದಾಮಿನಲ್ಲಿದ್ದö್ದ ೬,೦೭೭ ಕ್ವಿಂಟಾಲï ಅಕ್ಕಿ ನಾಪತ್ತೆ ಕುರಿತು ಶಹಾಪುರ ನಗರ ಠಾಣೆಯಲ್ಲಿ ೨೦೨೩ರ ನ.೨೩ರಂದು ದಾಖಲಾಗಿದ್ದ ಕೇಸ್‌ಗೆ ಸಂಬಂಧಿಸಿದಂತೆ ಪೊಲೀಸರು ನಾಲ್ಕು ದಿನ ಹಿಂದೆ ಮಣಿಕಂಠ ಅವರನ್ನು ಬಂಧಿಸಿದ್ದಾರೆ.

ವೈರಲ್ ಆಗಿರುವ ಮಣಿಕಂಠ ರಾಠೋಡ್ ಕೈಬರೆದಿದ್ದು ಎನ್ನಲಾದ ಪತ್ರದಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ ತಮ್ಮ ಆಪ್ತ ಮಲ್ಲಿಕ್ ಚಾಮನಾಳ ಎಂಬಾತನ ಮೂಲಕವೇ ಅಕ್ಕಿ ಅಕ್ರಮವಾಗಿ ಸಾಗಿಸಿದ್ದಾರೆ. ಆದರೆ ಆತನನ್ನು ಬಂಧಿಸುತ್ತಿಲ್ಲ. ನನ್ನನ್ನು ಮಾತ್ರ ಬಂಧಿಸಿ ತೊಂದರೆ, ಕಿರುಕುಳ ನೀಡಲಾಗುತ್ತಿದೆ ಎಂದು ದೂರಲಾಗಿದೆ.

ಪಡಿತರ ಸಾಗಣೆ ವಾಹನಗಳಿಗೆ ನಿಯಮದಂತೆ ಜಿಪಿಎಸ್ ಅಳವಡಿಸದಿರುವ ಬಗ್ಗೆ ಲೋಕಾಯುಕ್ತರಿಗೆ ೨೦೨೩ರ ನ.೧೫ರಂದು ಮಣಿಕಂಠ ರಾಠೋಡ್ ದೂರು ಸಲ್ಲಿಸಿದ್ದರಂತೆ. ಸಚಿವರೇ ಮಲ್ಲಿಕ್ ಮೂಲಕ ಅಕ್ಕಿ ಮಾರಾಟಕ್ಕೆ ಮುಂದಾಗಿದ್ದರು ಎಂಬ ಅಂಶ ಚರ್ಚೆಗೆ ಗ್ರಾಸವಾಗಿದೆ. ಮಲ್ಲಿಕ್, ಮಣಿಕಂಠಗೆ ಕರೆ ಮಾಡಿ ಅಬ್ಬೆತುಮಕೂರು ಮಠದಲ್ಲಿ ಭೇಟಿಯಾಗೋಣ ಎಂದು ಹೇಳಿದ್ದ. ಆದರೆ ನಾನು ಅಕ್ಕಿ ದಂಧೆ ಮಾಡುವುದಿಲ್ಲ. ನಾನು ಸಹ ಚುನಾವಣೆಗೆ ಸ್ಪರ್ಧಿಸುವೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸದ್ಯ ವೈರಲ್ ಆಗಿರುವ ಪತ್ರ ಮಣಿಕಂಠ ಬರೆದಿದ್ದೋ ಅಥವಾ ಬೇರೆಯವರು ಬರೆದಿರುವುದೇ ಎಂಬುದು ಪೊಲೀಸ್ ತನಿಖೆಯಿಂದ ಬೆಳಕಿಗೆ ಬರಬೇಕಿದೆ.