ಜಿಲ್ಲೆ

ಸಚಿವದ್ವಯರಲ್ಲೇ ದ್ವಂದ್ವ ನಿಲುವು!

ಹನೂರು: ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಹಾಗೂ ಅರಣ್ಯ ಸಚಿವ ಉಮೇಶ್ ವಿ. ಕತ್ತಿ ಅವರು ಕೈಗೊಂಡಿರುವ ನಿರ್ಧಾರಗಳು ಜಿಲ್ಲೆಯ ಮಲೆಮಹದೇಶ್ವರ ವನ್ಯಜೀವಿ ಧಾಮ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವಾಗಿ ಘೋಷಣೆಯಾಗಲಿದೆಯೋ ಅಥವಾ ಇಲ್ಲವೋ ಎಂಬ ದ್ವಂದ್ವ ಕ್ಷೇತ್ರದ ಜನರಲ್ಲಿ ಮನೆ ಮಾಡಿದೆ.


ಹನೂರು ತಾಲೂಕಿನಲ್ಲಿ ಹೆಚ್ಚಾಗಿ ಕಾವೇರಿ ವನ್ಯಜೀವಿ ಧಾಮದೊಂದಿಗೆ ಬೆಸೆದುಕೊಂಡಿರುವ ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಸುಮಾರು 25ಕ್ಕೂ ಹೆಚ್ಚು ಹುಲಿಗ ಳಿವೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಈ ಧಾಮವನ್ನು ಹುಲಿ ಸಂರ ಕ್ಷಿತ ಅರಣ್ಯ ಪ್ರದೇಶವನ್ನಾಗಿ ರೂಪಿಸುವ ಯೋಜನೆ ಸಿದ್ಧಪಡಿಸಿ 2018ರಲ್ಲಿಯೇ ಕೇಂದ್ರ ಸರ್ಕಾ ರಕ್ಕೆ ಪ್ರಸ್ತಾವನೆ ಸಲ್ಲಿ ಸಿತ್ತು. 2022, ಮಾ. 12ರಂದು ನಡೆದ ಸಚಿವ ಸಂಪುಟದ ಸಭೆ ಯಲ್ಲಿ ಸರ್ಕಾರ ದಿಂದ ಒಪ್ಪಿಗೆಯೂ ದೊರೆತ್ತಿತ್ತು. ಆದರೆ ಈ ಪ್ರದೇಶದಲ್ಲಿ ನೆಲೆಸಿರುವ ಜನರು, ಅದರಲ್ಲೂ ಗಿರಿಜನರು, ಬೇಡಗಂಪಣರಿಂದ ಯೋಜನೆಯ ಅನುಷ್ಠಾನಕ್ಕೆ ವಿರೋಧ ವ್ಯಕಪಡಿಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಜತೆಗೆ ಸಚಿವ ವಿ.ಸೋಮಣ್ಣ ಅವರ ಗಮನಕ್ಕೂ ತರಲಾಗಿತ್ತು. ಈತನ್ಮಧ್ಯೆ ಮ.ಬೆಟ್ಟದ ತಪ್ಪಲಿನಲ್ಲಿರುವ ಜನರು ಪಾದಯಾತ್ರೆಯನ್ನು ಹಮ್ಮಿಕೊಳ್ಳಲು ಸಹ ನಿರ್ಧರಿಸಿದ್ದರು.


ನಿಟ್ಟುಸಿರು ಬಿಟ್ಟಿದ್ದ ಜನತೆ: ಆ.3 ರಂದು ಪೊನ್ನಾಚಿ ಗ್ರಾಮ ದಲ್ಲಿ ನಡೆದ ಸಾಲೂರು ಬೃಹನ್ಮಠದ ಹಿರಿಯ ಶ್ರೀ ಗುರು ಸ್ವಾಮೀಜಿ ಅವರ ಗುರುವಂದನಾ ಕಾರ್ಯಕ್ರಮದಲ್ಲಿ, ಮಲೆ ಮಹದೇಶ್ವರ ವನ್ಯಜೀವಿ ಧಾಮವನ್ನು ಯಾವುದೇ ಕಾರಣಕ್ಕೂ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವ ನ್ನಾಗಿ ಘೋಷಿಸಲು ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಬಿಡುವುದಿಲ್ಲ. ಈ ಯೋಜನೆಯ ಘೋಷಣೆಯ ಬಗ್ಗೆ ನನ್ನ ವಿರೋಧವೂ ಇದೆ. ಹಾಗಾಗಿ ಜನರು ನಿಶ್ಚಿಂತೆಯಿಂದಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅಭಯ ನೀಡಿದ್ದರಲ್ಲದೇ ಈ ಹಿಂದಿದ್ದ ಡಿಎಫ್‌ಒ ಏಡುಕೊಂಡಲು (ಪ್ರಸ್ತುತ ವರ್ಗಾವಣೆ) ಅವರಿಗೆ ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಸೂಚನೆ ನೀಡಿದ್ದರು. ಇದರಿಂದ ಜನತೆ ಕೊಂಚ ನಿಟ್ಟುಸಿರು ಬಿಟ್ಟಿದ್ದರು.


ಸಿಎಂ ತೀರ್ಮಾನವೇ ಅಂತಿಮ?
ಒಂದು ಕಡೆ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಕ್ಷೇತ್ರದ ಜನತೆಯ ಹಿತದೃಷ್ಟಿಯಿಂದ ಟೈಗರ್ ಪ್ರಾಜೆಕ್ಟ್ ಅನ್ನು ಕೈಬಿಡಲು ನಿರ್ಧರಿಸಿದ್ದರೆ ಇತ್ತ ಅರಣ್ಯ ಸಚಿವ ವನ್ಯಸಂಪತ್ತನ್ನು ಸಂರಕ್ಷಿಸುವ ಉದ್ದೇಶದಿಂದ ಈ ಯೋಜನೆಯನ್ನು ಘೋಷಿಸುವುದು ಸೂಕ್ತ ಎಂದು ನಿರ್ಧರಿಸಿದ್ದಾರೆ.ಈ ಬಗ್ಗೆ ಸದ್ಯದಲ್ಲಿಯೇ ನಡೆಯುವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಲಾ ಗಿದೆ. ಆದ್ದರಿಂದ ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶದ ಘೋಷಣೆಯ ವಿಚಾರ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೈಗೊಳ್ಳುವ ನಿರ್ಧಾರದ ಮೇಲೆ ನಿಂತಿದೆ. ಆಗಾಗಿ ಸಿಎಂ ತೀರ್ಮಾ ನವೇ ಅಂತಿಮವಾ ಗಲಿದ್ದು, ನಿರ್ಣಾಯಕ ಪಾತ್ರ ವಹಿಸಲಿದೆ. ಆದ್ದರಿಂದ ಈ ಯೋಜನೆ ಘೋಷಣೆಯಾ ಗಲಿದೆಯೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಿದೆ.


ಆ.8 ರಂದು ಅರಣ್ಯ ಸಚಿವ ಉಮೇಶ್ ವಿ.ಕತ್ತಿ ಅವರು ಮ.ಬೆಟ್ಟದ ಸಾಲೂರು ಬೃಹನ್ಮಠಕ್ಕೆ ಆಗಮಿಸಿದ್ದ ವೇಳೆ ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಾಸಕ ಆರ್. ನರೇಂದ್ರ, ಬೇಡಗಂಪಣರು, ಸೋಲಿಗರು ಹಾಗೂ ರೈತರು ಈ ಯೋಜನೆ ಅನುಷ್ಟಾನಗೊಳಿಸಿದರೆ ಕ್ಷೇತ್ರದ ಜನರಿಗೆ ಹಾಗೂ ಮ.ಬೆಟ್ಟಕ್ಕೆ ಆಗಮಿಸುವ ಭಕ್ತರಿಗೆ ತೊಂದರೆಯಾಗಲಿದೆ. ಹಾಗಾಗಿ ಈ ಯೋಜನೆ ಜಾರಿಗೆ ತರುವುದನ್ನು ಕೈ ಬಿಡಬೇಕು ಎಂದು ಮನವಿ ಮಾಡುವುದರ ಮೂಲಕ ವಿರೋಧ ವ್ಯಕ್ತಪಡಿಸಿದರು. ಆದರೆ ಸಚಿವರು ಸಂಪುಟದಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ.


ಇತ್ತ ಆ.7 ರಂದು ಹನೂರು ತಾಲೂಕಿನ ಶಾಗ್ಯ ಬಳಿಯ ಬೂದಿಕೆರೆ ಅರಣ್ಯ ಪ್ರದೇಶದ ಮೇಕೆದಾಟು ನದಿ ಪಾತ್ರಕ್ಕೆ ಭೇಟಿ ನೀಡಿದ್ದ ಅರಣ್ಯ ಸಚಿವ ಉಮೇಶ್ ವಿ.ಕತ್ತಿ ಅವರು ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಿದೆ. ಹಾಗಾಗಿ ಅರಣ್ಯ ಸಂಪತ್ತನ್ನು ರಕ್ಷಿಸುವುದು ನಮ್ಮ ಆದ್ಯ ಕರ್ತವ್ಯ. ಈ ಧಾಮವನ್ನು ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವನ್ನಾಗಿ ಘೋಷಿಸಲು ಕ್ರಮವಹಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದೇ ಸರ್ಕಾರದಲ್ಲಿ ಇಬ್ಬರು ಸಚಿವರ ಈ ನಿರ್ಧಾರದಿಂದ ನಿಟ್ಟುಸಿರು ಬಿಟ್ಟಿದ್ದ ಜನತೆಯಲ್ಲಿ ಮತ್ತೆ ಆತಂಕ ಶುರುವಾಗಿದೆ.

ಕೆಲ ಕಡೆಗಳಲ್ಲಿ 4-8 ಹುಲಿಗಳಿರುವ ವನ್ಯಜೀವಿ ಧಾಮವನ್ನು ಹುಲಿ ಸಂರಕ್ಷಿತ ಮೀಸಲು ಅರಣ್ಯ ಪ್ರದೇಶವನ್ನಾಗಿದೆ. ಆದರೆ, ಮಲೆಮಹದೇಶ್ವರ ವನ್ಯಜೀವಿ ಧಾಮದಲ್ಲಿ 25ಕ್ಕೂ ಹೆಚ್ಚು ಹುಲಿಗಳಿವೆ. ಹಾಗಾಗಿ, ಈ ಯೋಜನೆಯನ್ನು ಜಾರಿಗೆ ತರುವುದು ಸೂಕ್ತ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುವುದು. ಒಂದು ವೇಳೆ ರಾಜ್ಯ ಸರ್ಕಾರ ಈ ಯೋಜನೆಯನ್ನು ಘೋಷಿಸದಿದ್ದರೂ ಕೇಂದ್ರ ಸರ್ಕಾರ ಮಾತ್ರ ಈ ಯೋಜನೆಯನ್ನು ಕೈ ಬಿಡಲ್ಲ.ಉಮೇಶ್ ವಿ.ಕತ್ತಿ ಅರಣ್ಯ ಸಚಿವಈ ಯೋಜನೆ ಘೋಷಣೆಯಾದರೆ ಅರಣ್ಯ ಪ್ರದೇಶದೊಳಗೆ ನೆಲೆಸಿರುವ ಜನರು ಎಲ್ಲಿಗೆ ಹೋಗಬೇಕು? ಇದರಿಂದ ತುಂಬಾ ಅನನುಕೂಲವಾಗಲಿದೆ. ಈ ಬಗ್ಗೆ ಸಚಿವ ಸಂಪುಟದೊಂದಿಗೆ ಚರ್ಚಿಸಲಾಗುವುದು. ಆದ್ದರಿಂದ ಜನರು ನಿಶ್ಚಿಂತೆಯಿಂದಿರಿ.ವಿ.ಸೋಮಣ್ಣ ಸಚಿವ (ಪೊನ್ನಾಚಿ ಕಾರ್ಯಕ್ರಮದಲ್ಲಿ ಹೇಳಿದ್ದು)