ಮಹಿಳೆ ಮೇಲೆ ಹಲ್ಲೆ ನಡೆಸಿರುವ ಸಚಿವ ವಿ.ಸೋಮಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಡುವಂತೆ ಆಗ್ರಹಿಸಿ ರೈತಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸತೀಶ್‌ರಾವ್, ಇಮ್ಮಾವು ರಘು, ಶಿವಣ್ಣ ಇದ್ದರು. 
ಜಿಲ್ಲೆ

ಸಚಿವ ಸೋಮಣ್ಣ ವಜಾಗೆ ಆಗ್ರಹಿಸಿ ಪ್ರತಿಭಟನೆ

ನಂಜನಗೂಡು: ಬಡ ಮಹಿಳೆಗೆ ಕಪಾಳ ಮೋಕ್ಷ ಮಾಡಿದ ವಸತಿ ಸಚಿವ ವಿ.ಸೋಮಣ್ಣ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿ ರೈತಸಂಘ ಹಸಿರುಸೇನೆ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

ನಗರದ ಅಂಬೇಡ್ಕರ್ ಪ್ರತಿಮೆ ಮುಂಭಾಗದ ಸಮಾವೇಶಗೊಂಡ ಕಾರ್ಯಕರ್ತರು ಸಚಿವ ವಿ.ಸೋಮಣ್ಣ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಗುಂಡ್ಲುಪೇಟೆ ತಾಲೂಕಿನ ಅಂಗಳ ಗ್ರಾಮದ ಕೆಂಪಮ್ಮ ತನ್ನ ಕಷ್ಟವನ್ನು ಹೇಳಿಕೊಳ್ಳಲು ಸಚಿವ ವಿ.ಸೋಮಣ್ಣ ಬಳಿ ಆಗಮಿಸುತ್ತಿದ್ದಂತೆ ಕಪಾಳಕ್ಕೆ ಹೊಡೆದಿರುವುದು ಅವರಿಗೆ ಶೋಭೆ ತರುವಂತದ್ದಲ್ಲ. ಮಹಿಳೆಯರನ್ನು ಗೌರವಿಸುವುದು ನಮ್ಮ ನಲೆದ ಸಂಸ್ಕೃತಿ ಎಂಬ ಪರಿವೇ ಇಲ್ಲದೇ ಉದ್ಧಟತನ ತೋರಿರುವ ಸೋಮಣ್ಣ ಅಧಿಕಾರದಲ್ಲಿ ಉಳಿಯಲು ಯಾವುದೇ ನೈತಿಕತೆ ಇಲ್ಲ. ಕೂಡಲೇ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಸಿಎಂ ಬಸವರಾಜ ಬೊಮ್ಮಾಯಿ ಅವರು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು.

ಸೋಮಣ್ಣ ಅವರನ್ನು ಸಚಿವ ಸ್ಥಾನದಿಂದ ಕೈಬಿಡದೇ ಇದ್ದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. ಮುಖ್ಯಮಂತ್ರಿಗಳಿಗೆ ಬರೆದಿರುವ ಮನವಿ ಪತ್ರವನ್ನು ತಹಸೀಲ್ದಾರ್ ಕಚೇರಿಯಲ್ಲಿ ಸಲ್ಲಿಸುವ ಮೂಲಕ ಪ್ರತಿಭಟನೆ ಕೈ ಬಿಡಲಾಯಿತು. ರೈತಸಂಘದ ತಾಲೂಕು ಅಧ್ಯಕ್ಷ ಸಿಂಧುವಳ್ಳಿ ಸತೀಶ್‌ರಾವ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಮ್ಮಾವು ರಘು, ಶಿವಣ್ಣ, ದೊಡ್ಡಯ್ಯ, ಕುಮಾರ್, ಮಾದಪ್ಪ, ಶಿವಕುಮಾರ್, ರವಿ ಸೇರಿದಂತೆ ಇತರರಿದ್ದರು.