ಜಿಲ್ಲೆ

ಸಚಿವ ಸುಧಾಕರ್ ರಾಜೀನಾಮೆಗೆ ಪಟ್ಟು, ದೇವನಹಳ್ಳಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ

ದೇವನಹಳ್ಳಿ: ‘ಬೌದ್ಧ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ಧರ್ಮ ಧರ್ಮಗಳ ನಡುವೆ ವಿಷ ಬೀಜ ಬಿತ್ತಿರುವ ಡಾ.ಕೆ.ಸುಧಾಕರ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ’ ನೀಡಬೇಕು ಎಂದು ಡಿಎಸ್‌ಎಸ್ ಸಂಘಟನಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಆಗ್ರಹಿಸಿದರು.

ದೇವನಹಳ್ಳಿಯಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ಸಚಿವ ಡಾ.ಸುಧಾಕರ್ ವಿರುದ್ಧ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದ ಸಮಾರಂಭವೊಂದರಲ್ಲಿ ಸುಧಾಕರ್, ಬೌದ್ಧ ಧರ್ಮಧ ಅಪಾಯದಿಂದ ಭಾರತವನ್ನು ಕಾಪಾಡಿದ್ದು ಬ್ರಾಹ್ಮಣರ ಹೆಗ್ಗಳಿಕೆಯಾಗಿದೆ, ಬೌದ್ಧ ಧರ್ಮದ ಸುಳಿಗೆ ಸಿಲುಕಿ ವಿಶ್ವದ ಹಲವಾರು ದೇಶಗಳು ನಮ್ಮ ನೆಲೆ ಕಳೆದುಕೊಳ್ಳುವಾಗ ಅದನ್ನು ತಡೆದು ಭಾರತೀಯ ಧರ್ಮ ರಕ್ಷಣೆ ಮಾಡಿದ ಕೀರ್ತಿ ಬ್ರಾಹ್ಮಣ ಸಮುದಾಯದ ಆದಿಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂಬ ಹೇಳಿಕೆ ನೀಡುವ ಮೂಲಕ ವಿಶ್ವಶಾಂತಿ ಸಂದೇಶ ಸಾರುವ ಬೌದ್ಧ ಧರ್ಮದ ಬಗ್ಗೆ ಅವಹೇಳನ ಮಾಡಿದ್ದು, ಅವರು ಸಚಿವ ಸ್ಥಾನದಲ್ಲಿ ಮುಂದುವರಿಯಲು ನೈತಿಕತೆ ಹೊಂದಿಲ್ಲ ಎಂದರು.

ಬುದ್ಧಮ್ಮ ಬಂತೇಜಿ ಮಾತನಾಡಿ, ವಿಶ್ವ ಶಾಂತಿ ಬಯಸುವ ಬೌದ್ಧ ಧರ್ಮದ ಬಗ್ಗೆ ಕೇವಲವಾಗಿ ಮಾತನಾಡಿರುವ ಸಚಿವರ ಹೇಳಿಕೆ ಖಂಡನೀಯ ಎಂದರು.

ಡಿಎಸ್‌ಎಸ್ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಹಿಂದು ಧರ್ಮದ ಮೌಢ್ಯ ಕಟ್ಟುಪಾಡು, ಅಸಮಾನತೆಗೆ ಬೇಸತ್ತು ಬೌದ್ಧ ಧರ್ಮ ಸ್ವೀಕರಿಸಿದ ಡಾ. ಬಿ.ಆರ್.ಅಂಬೇಡ್ಕರ ಅವರು ರಚಿಸಿದ ಸಂವಿಧಾನದ ಮೇಲೆ ಸರ್ವಧರ್ಮವನ್ನು ಸಮಾನತೆಯಿಂದ ಕಾಣುತ್ತೇನೆ ಎಂದು ಪ್ರಮಾಣ ಮಾಡಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಸುಧಾಕರ್ ಸಂವಿಧಾನದ ಆಶಯಗಳನ್ನು ಗಾಳಿಗೆ ತೂರಿ ಮನು ಸಿದ್ಧಾಂತವನ್ನು ಬೆಂಬಲಿಸುವ ನಡೆ ಸಲ್ಲ ಎಂದರು.

ಸುಧಾಕರ್ ಅವರನ್ನು ಸಂಪುಟದಿಂದ ಕೈಬಿಡದಿದ್ದರೆ ದಲಿತ ಸಂಘಟನೆಗಳು, ಬೌದ್ಧ ಉಪಾಸಕರು ವಿಧಾನಸೌಧ ಮುತ್ತಿಗೆ ಹಾಕುತ್ತೇವೆ ಎಂದರು.

ಇದಕ್ಕೂ ಮೊದಲು ಪ್ರವಾಸಿ ಮಂದಿರದಿಂದ ತಾಲೂಕು ಕಚೇರಿವರೆಗೂ ಪ್ರತಿಭಟನಾ ರ‌್ಯಾಲಿ ನಡೆಸಿ ತಹಸೀಲ್ದಾರ್ ಶಿವರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು.

ನ್ಯಾನಲೋಕ ಬಂತೇಜಿ, ಬುದ್ಧಪ್ರಿಯ, ಬುದ್ಧಪಾಲ, ಎಸ್‌ಎಸ್‌ಡಿ ಸಂಚಾಲಕ ಚನ್ನಕೃಷ್ಣಪ್ಪ, ಚೌಡಪನಹಳ್ಳಿ ಲೋಕೇಶ್, ಡಿಎಸ್‌ಎಸ್ ಜಿಲ್ಲಾ ಸಂಚಾಲಕ ತಿಮ್ಮರಾಯಪ್ಪ, ಪಿವಿಸಿಎಸ್ ಅಧ್ಯಕ್ಷ ಮುನಿ ಆಂಜಿನಪ್ಪ, ಪದಾಧಿಕಾರಿಗಳಾದ ಎಚ್.ಕೆ. ವೆಂಕಟಶಪ್ಪ, ಕೆಂಪಣ್ಣ, ಮುನಿರಾಜಪ್ಪ, ನಾರಾಯಣಸ್ವಾಮಿ, ಸೋಲೂರು ನಾಗರಾಜ್ ಇದ್ದರು.