ಜಿಲ್ಲೆ

ಸಚಿವ ಸಂಪುಟದಿಂದ ಚಲುವರಾಯಸ್ವಾಮಿ ವಜಾಗೊಳಿಸಿ

ಮಂಜುನಾಥ ತಿಮ್ಮಯ್ಯ

ಮೈಸೂರು: ನಾಗಮಂಗಲದ ಕೆಎಸ್‌ಆರ್‌ಟಿಸಿ ಚಾಲಕ ಜಗದೀಶ್ ಆತ್ಮಹತ್ಯೆಗೆ ಯತ್ನಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಜಗದೀಶ್ ಆರೋಗ್ಯ ವಿಚಾರಿಸಿದ ಬಳಿಕ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಬಂದು ಒಂದು ತಿಂಗಳಾಗುವಷ್ಟರಲ್ಲೇ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಕೂಡಲೇ ಸಚಿವ ಚಲುವರಾಯಸ್ವಾಮಿಯನ್ನು ವಜಾ ಮಾಡಿ, ಪ್ರಕರಣದ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಆತ್ಮಹತ್ಯೆಗೆ ಯತ್ನಿಸಿರುವ ಜಗದೀಶ್ ಸದ್ಯಕ್ಕೆ ವೆಂಟಿಲೇಟರ್‌ನಲ್ಲಿದ್ದಾರೆ. ವರ್ಗಾವಣೆ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ. ಆದರೆ, ಈ ರೀತಿ ಮಾಡುವುದು ಸರಿಯಲ್ಲ. ಜಗದೀಶ್ ಅವರ ಪತ್ನಿ ಪಂಚಾಯಿತಿ ಸದಸ್ಯರು. ಊರಿನಲ್ಲಿರುವ ರೌಡಿ, ಚೇಲಾನೊಬ್ಬನ ಮೂಲಕ ಈ ಕುಟುಂಬಕ್ಕೆ ಕಿರುಕುಳ ನೀಡಿದ್ದಾನೆ. ಈ ಹೆಣ್ಣು ಮಗಳಿಗೆ ಜೆಡಿಎಸ್ ಪಕ್ಷ ಬಿಡುವಂತೆ, ಕಾಂಗ್ರೆಸ್ ಸೇರುವಂತೆ ಒತ್ತಡ ಹೇರಿದ್ದಾನೆ ಎಂದು ದೂರಿದರು.

ಮತ್ತೊಂದೆಡೆ ಜಗದೀಶ್‌ಗೆ ಅಧಿಕಾರಿಗಳ ಮೂಲಕ ಕಿರುಕುಳ ಕೊಡಿಸಲಾಗಿದೆ. ಪತ್ರದಲ್ಲಿ ಜಗದೀಶ್ ಇದನ್ನು ಸ್ಪಷ್ಟವಾಗಿ ಬರೆದಿದ್ದಾರೆ. ‘ಸಚಿವರ ಆದೇಶ ಇದೆ, ಒತ್ತಡ ಇದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಸರ್ಕಾರಕ್ಕೆ ಮಾನ, ಮರ್ಯಾದೆ ಇದ್ದರೆ ಅವರನ್ನು ಮಂತ್ರಿ ಸ್ಥಾನದಿಂದ ಕೆಳಗಿಳಿಸಲಿ. ಘಟನೆ ಸಂಬಂಧ ಅಧಿಕಾರಿಗಳನ್ನು ಕೇಳಿದರೆ ಇನ್ನೂ ವ್ಯಕ್ತಿ ಸತ್ತಿಲ್ಲ. ಆ ಕಾರಣಕ್ಕೆ ಎಫ್‌ಐಆರ್ ಹಾಕಿಲ್ಲ ಅಂತಾರೆ. ಇವರಿಗೆ ಮತ ಹಾಕಿದ್ದು ಜನರ ಜೀವದ ಜತೆ ಚೆಲ್ಲಾಟ ಆಡಲು ಅಲ್ಲ ಎಂದು ಹರಿಹಾಯ್ದರು.

ದುಡ್ಡು ತೆಗೆದುಕೊಂಡು ವರ್ಗಾವಣೆ ಮಾಡುವುದು ಕಾಂಗ್ರೆಸ್‌ನವರ ಚಾಳಿ. ಅದು ಅವರ ಹಣೆಬರಹ. ಆದರೆ, ರಾಜಕೀಯ ಕಾರಣಕ್ಕಾಗಿ ಈ ರೀತಿಯ ಕಿರುಕುಳ ನೀಡುವುದನ್ನು ನಾವು ಸಹಿಸುವುದಿಲ್ಲ. ಅಧಿಕಾರದ ದರ್ಪ ಈ ಮಟ್ಟಕ್ಕೆ ಹೋಗಬಾರದು ಎಂದು ಕಿಡಿಕಾರಿದರು.
ನಮ್ಮ ಕುಟುಂಬದ ಆಸ್ತಿ ಬಗ್ಗೆ ಈ ಸರ್ಕಾರ ಅಂತಾರಾಷ್ಟ್ರೀಯ ತನಿಖಾ ಸಂಸ್ಥೆಯಿಂದ ಬೇಕಾದರೆ ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದರು.

ಸಿಎಂ ಮೂಗಿನ ನೇರದಲ್ಲಿ ವರ್ಗಾವಣೆ
ವರ್ಗಾವಣೆ ದಂಧೆ ಮುಖ್ಯಮಂತ್ರಿ ಮೂಗಿನ ನೇರದಲ್ಲಿ ನಡೆಯುತ್ತಿದೆ. ಅವರ ಮೂಲಕವೇ ವರ್ಗಾವಣೆ ಆದೇಶ ಆಗುತ್ತದೆ ಎಂದು ಕುಮಾರಸ್ವಾಮಿ ಆರೋಪಿಸಿದರು.

ಸರ್ಕಾರ ನಡೆಯಬೇಕಾದರೆ ವರ್ಗಾವಣೆ ಅನಿವಾರ್ಯ. ಆದರೆ, ಯಾವ ಅಳತೆಗೋಲು ಇಟ್ಟುಕೊಂಡು ವರ್ಗಾವಣೆ ಮಾಡುತ್ತಿದ್ದೀರಿ? ಎಲ್ಲ ಪ್ರಮುಖ ಹುದ್ದೆಗಳೆಲ್ಲವೂ ದುಡ್ಡಿನಿಂದಲೇ ವರ್ಗಾವಣೆ ಆಗುತ್ತಿವೆ ಎಂದು ಮುಖ್ಯಮಂತ್ರಿ ವಿರುದ್ಧ ಕಿಡಿಕಾರಿದರು.
ನನ್ನ ಅವಧಿಯಲ್ಲಿ ಕ್ಷೇತ್ರದಲ್ಲಿ ಒಂದು ವರ್ಗಾವಣೆ ಮಾಡಿಲ್ಲ. ಕಾಂಗ್ರೆಸ್ ಶಾಸಕರ ಹಣೆಬರಹ ಏನಾಗಿದೆ ಅಂತಲೂ ಗೊತ್ತು. ಹಣ ಕೊಡದಿದ್ದರೆ ಯಾರ ಕೆಲಸವೂ ಆಗುತ್ತಿಲ್ಲ. ದುಡ್ಡು ಬೇಕಾದರೆ ಮಾಡಿಕೊಳ್ಳಲಿ, ಜೀವದ ಜತೆ ಚೆಲ್ಲಾಟವಾಡುವುದು ಬೇಡ. ಸದನದಲ್ಲಿ ಇದೇ ವಿಚಾರ ಇಟ್ಟು ಹೋರಾಟ ಮಾಡುತ್ತೇನೆ ಎಂದು ಗುಡುಗಿದರು.

ವೈಎಸ್‌ಟಿ ಅಂದರೆ ಏನು?:
ರಾಜ್ಯದಲ್ಲಿ ಹೊಸ ಹೊಸ ಟ್ಯಾಕ್ಸ್‌ಗಳು ಆರಂಭವಾಗಿವೆ ಎಂದು ಎಚ್‌ಡಿಕೆ ಮತ್ತೊಮ್ಮೆ ಹರಿಹಾಯ್ದರು. ಟ್ಯಾಕ್ಸ್ ನೀಡಿದರೆ ಮಾತ್ರ ಇವರಿಗೆ ಲಾಭ. ವೈಎಸ್‌ಟಿ ಟ್ಯಾಕ್ಸ್ ಬಗ್ಗೆ ಎಲ್ಲ ರಾಜಕಾರಣಿಗಳಿಗೂ ಗೊತ್ತಿದೆ. ನನಗೂ ಯಾರೋ ಈ ಬಗ್ಗೆ ಹೇಳಿದ್ದರು. ಆದರೆ, ವೈಎಸ್‌ಟಿ ಅಂದರೆ ಏನು ಎಂಬುದು ನನಗೂ ಸರಿಯಾಗಿ ಗೊತ್ತಿಲ್ಲ ಬ್ರದರ್. ಈ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು

ಪೆನ್‌ಡ್ರೈವ್ ದಾಖಲೆ ಬಿಡುಗಡೆಗೆ ಆತುರ ಇಲ್ಲ
ಪೆನ್‌ಡ್ರೈವ್‌ನಲ್ಲಿರುವ ರಹಸ್ಯ ಹೊರಗೆ ಬಂದರೆ ಮಂತ್ರಿ ರಾಜೀನಾಮೆ ನೀಡುತ್ತಾರೆ ಎಂದು ಕುಮಾರಸ್ವಾಮಿ ಹೇಳಿದರು.
ಪೆನ್‌ಡ್ರೈವ್ ದಾಖಲೆಯನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುವೆ. ಈ ಸರ್ಕಾರದವರು ಏನು ಮಾತಾಡಬೇಕೋ, ಎಲ್ಲವನ್ನೂ ಮಾತನಾಡಲಿ. ಹಿಟ್ ಆ್ಯಂಡ್ ರನ್ ಅಂತಾರೆ. ಅವರು ಹೀಗೆ ಮಾತನಾಡುತ್ತಿರಲಿ, ನಾನು ಸೂಕ್ತ ಸಮಯದಲ್ಲಿ ದಾಖಲೆ ಬಿಡುಗಡೆ ಮಾಡುತ್ತೇನೆ. ಪೆನ್‌ಡ್ರೈವ್ ದಾಖಲೆ ಬಿಡುಗಡೆಗೆ ನನಗೆ ಆತುರ ಇಲ್ಲ ಎಂದು ತಿಳಿಸಿದರು.