ಜಿಲ್ಲೆ

ಸಚಿವ ಸಂಪುಟದಲ್ಲಿ ಬೀದರ್ ಕಡೆಗಣನೆ

ಬೀದರ್: ರಾಜ್ಯದ ನೂತನ ಕಾಂಗ್ರೆಸ್ ಸರ್ಕಾರದ ಸಚಿವ ಸಂಪುಟದಲ್ಲಿ ಬೀದರ್ ಜಿಲ್ಲೆಯನ್ನು ಕಡೆಗಣಿಸಿದ್ದಕ್ಕೆ ಬೀದರ್ ನಗರಸಭೆ ಮಾಜಿ ಉಪಾಧ್ಯಕ್ಷ ಫೆಲೋಮನ್ ರಾಜ್ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮೊದಲ ಹಂತದಲ್ಲಿ ಬೀದರ್ ಜಿಲ್ಲೆಯ ಒಬ್ಬರಿಗೂ ಸಚಿವ ಸ್ಥಾನ ನೀಡದಿರುವುದು ಜಿಲ್ಲೆಯ ಜನರ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಜಿಲ್ಲೆಯ ಜನ ಹಿಂದಿನಿಂದಲೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತ ಬಂದಿದ್ದಾರೆ. ಈ ಬಾರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದ ಕಾರಣ ಸಹಜವಾಗಿಯೇ ಜಿಲ್ಲೆಗೆ ಸಚಿವ ಸ್ಥಾನ ದೊರಕುವ ನಿರೀಕ್ಷೆ ಎಲ್ಲರಲ್ಲಿ ಇತ್ತು. ಆದರೆ, ಮೊದಲ ಪಟ್ಟಿಯಲ್ಲಿ ಅದು ಹುಸಿಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲೇ ಚುನಾವಣೆಗೆ ಸಂಬಂಧಿಸಿದ ಬಹುತೇಕ ಯಾತ್ರೆಗಳನ್ನು ಶರಣರ ನಾಡಾದ ಜಿಲ್ಲೆಯ ಬಸವಕಲ್ಯಾಣದಿಂದಲೇ ಶುರು ಮಾಡಲಾಗುತ್ತದೆ. ಇದು, ಯಾತ್ರೆಗಷ್ಟೇ ಸೀಮಿತವಾಗದೆ, ಸಚಿವ ಸ್ಥಾನದ ವಿಷಯದಲ್ಲೂ ಜಿಲ್ಲೆಗೆ ಪ್ರಾಧಾನ್ಯತೆ ಸಿಗುವಂತಾಗಬೇಕು. 2024 ರಲ್ಲಿ ಲೋಕಸಭೆ ಚುನಾವಣೆ ಇರುವ ಕಾರಣ ಜಿಲ್ಲೆಗೆ ಸಚಿವ ಸ್ಥಾನ ಕೊಡುವುದು ಅವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲೆಯಲ್ಲಿ ಕಾಂಗ್ರೆಸ್‍ನಿಂದ ಈಶ್ವರ ಖಂಡ್ರೆ ಹಾಗೂ ರಹೀಂಖಾನ್ ಆಯ್ಕೆಯಾಗಿದ್ದಾರೆ. ನಾಲ್ಕನೇ ಬಾರಿಗೆ ಆಯ್ಕೆಯಾದ ಶಾಸಕರಾಗಿದ್ದಾರೆ. ಜಿಲ್ಲೆ, ಕಲ್ಯಾಣ ಕರ್ನಾಟಕ ಹಾಗೂ ರಾಜ್ಯದ ಅಭಿವೃದ್ಧಿಗಾಗಿ ಈ ಇಬ್ಬರಿಗೂ ಸಚಿವ ಸ್ಥಾನ ಕೊಡಬೇಕು ಎಂದು ಆಗ್ರಹಿಸಿದ್ದಾರೆ.