ಜಿಲ್ಲೆ

ಸಚಿವ ಸಂಪುಟಕ್ಕೆ ಕೆ.ಎನ್.ರಾಜಣ್ಣ ಮರು ಸೇರ್ಪಡೆಗೆ ಆಗ್ರಹಿಸಿ ನಾಯಕರ ಯುವ ಸೇನೆ ಪ್ರತಿಭಟನೆ

ಮೈಸೂರು: ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣ ಅವರನ್ನು ಕೈಬಿಟ್ಟಿರುವ ಕ್ರಮವನ್ನು ಖಂಡಿಸಿ ಕರ್ನಾಟಕ ರಾಜ್ಯ ನಾಯಕರ ಯುವ ಸೇನೆ ವತಿಯಿಂದ ಸೋಮವಾರ ಪ್ರತಿಭಟನೆ ನಡೆಯಿತು.

ನಗರದ ಗಾಂಧಿ ವೃತ್ತದಲ್ಲಿ ಜಮಾವಣೆಗೊಂಡ ಪ್ರತಿಭಟನಾಕಾರರು, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜಣ್ಣ ಅವರನ್ನು ಮತ್ತೆ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಸಂಘಟನೆ ಅಧ್ಯಕ್ಷ ದೇವರಾಜ್ ಟಿ. ಕಾಟೂರ್ ಮಾತನಾಡಿ, ವಾಲ್ಮೀಕಿ ನಾಯಕ ಸಮಾಜದ ಪ್ರಭಾವಿ ನಾಯಕರು ಸಹಕಾರ ಸಚಿವರಾಗಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸುತ್ತಿದ್ದ ರಾಜಣ್ಣ ಅವರನ್ನು ಯಾವುದೇ ನೋಟಿಸ್ ನೀಡದೆ ಕಾಂಗ್ರೆಸ್ ಹೈಕಮಾಂಡ್ ವಜಾ ಮಾಡಿರುವುದನ್ನು ವಾಲ್ಮೀಕಿ ಸಮಾಜ ಖಂಡಿಸುತ್ತದೆ. ರಾಜಣ್ಣ ಅವರು ಸಿದ್ದರಾಮಯ್ಯ ಅವರ ಬೆನ್ನೆಲುಬಾಗಿ ಇದ್ದು ಹಾಗೂ ಹೇಳಿಕೆಯನ್ನು ನೀಡುತ್ತಿದ್ದರು ಎನ್ನುವ ಕಾರಣದಿಂದ ರಾಜಣ್ಣ ಅವರನ್ನು ವಜಾ ಮಾಡಲಾಗಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಪ್ರಬಲ ಜನಸಂಖ್ಯೆ ಹೊಂದಿರುವ ನಾಯಕ ಸಮಾಜದಿಂದ ಯಾರೂ ಮುಖ್ಯಮಂತ್ರಿ ಆಗಿಲ್ಲ. ರಾಜಣ್ಣ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬೇಡಿಕೆ ಹೇಳಿಕೆ ನೀಡುತ್ತಿದ್ದರು. ಇದರೊಂದಿಗೆ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸ್ಥಾನವನ್ನು ಸಹ ಕೊಡಬೇಕಾಗುತ್ತದೆ ಎಂದು ಸ್ವಪಕ್ಷದವರು ಹುನ್ನಾರ ಮಾಡಿದ್ದಾರೆ.

2023ರ ಚುನಾವಣೆಯಲ್ಲಿ ಕಾಂಗ್ರೆಸ್ 136 ಸ್ಥಾನ ಗಳಿಸಲು ನಾಯಕ ಸಮಾಜ ಬಹಳ ಪ್ರಭಾವ ಬೀರಿದೆ. ತಕ್ಷಣವೇ ಹೈಕಮಾಂಡ್ ಸಚಿವ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಾಜಿ ಸಚಿವರಾದ ನಾಗೇಂದ್ರ ಅವರನ್ನು ಸಹ ವಾಲ್ಮೀಕಿ ಹಗರಣದಲ್ಲಿ ಬಲಿಪಶು ಮಾಡಲಾಗಿದೆ. ಆದ್ದರಿಂದ ಎರಡು ಸಚಿವ ಸ್ಥಾನ ಖಾಲಿ ಇರುವುದರಿಂದ ತಕ್ಷಣವೇ ನಾಗೇಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸಂಘಟನೆ ಮುಖಂಡರಾದ ಶಿವಕುಮಾರಸ್ವಾಮಿ, ಉದ್ಬೂರು ಎಂ.ಸೋಮಣ್ಣ, ರೈಲ್ವೆ ಸಿದ್ದಯ್ಯ, ಕಡಕೊಳ ಕುಮಾರಸ್ವಾಮಿ, ಹಿನಕಲ್ ಸ್ವಾಮಿ, ವಿಜಯ್‌ಕುಮಾರ್, ಸತೀಶ ನಾಯಕ, ಟಿ.ಎಂ.ಸ್ವಾಮಿ, ಶ್ರೀನಿವಾಸು, ಚೌಡನಾಯಕ, ರಮ್ಮನಹಳ್ಳಿ ನಾಗರಾಜು, ರಾಜಶೇಖರ್, ಉಮೇಶ್, ವೆಂಕಟನಾಯಕ, ಸಿಂಧುವಳ್ಳಿ ಅಂಕಪ್ಪ, ಮಂಜು ರಮ್ಮನಹಳ್ಳಿ, ದೊಡ್ಡವೀರನಾಯಕ, ಸಿ.ಸಿ.ಮಹದೇವು, ನರಸೀಪುರ ಶಿವಕುಮಾರ್, ಉದ್ಬೂರು ನಾರಾಯಣ, ದಂಡಪ್ಪ ಇತರರು ಇದ್ದರು.