ಮೈಸೂರು: ರಾಜ್ಯದಲ್ಲಿ ಸಚಿವ ಸಂಪುಟದ ಸದಸ್ಯರು ಬದಲಾಗಬಹುದು. ಹೊಸಬರಿಗೂ ಅವಕಾಶ ಸಿಗಬಹುದು ಎಂದು ಶಾಸಕ ಕೆ.ಹರೀಶ್‌ಗೌಡ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬದಲಾವಣೆ ಸಾಧ್ಯವೇ ಇಲ್ಲ. ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ. ಮೈಸೂರಿನ ಹಿರಿಯ ಶಾಸಕ ತನ್ವೀರ್ ಸೇಠ್ ಅವರಿಗೆ ಸಚಿವ ಸ್ಥಾನ ಸಿಗಲೇಬೇಕು. ಅವರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುವ ವಿಶ್ವಾಸವಿದೆ. ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಮುಂದೆ ದೇವರು, ಜನರ ಆಶೀರ್ವಾದ ಇದ್ದರೆ ನೋಡೋಣ ಎಂದು ಹೇಳಿದರು.
ನಟ ಕಮಲ್ ಹಾಸನ್ ಅವರೊಬ್ಬ ಅಜ್ಞಾನಿ, ಅಯೋಗ್ಯ. ಅವರಿಗೆ ಇತಿಹಾಸ ಗೊತ್ತಿಲ್ಲ. ಕನ್ನಡ ಭಾಷೆಯ ಬಗ್ಗೆ ಅರಿವಿಲ್ಲ. ಅವರು ಕನ್ನಡಿಗರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದರು.
ಸಚಿವ ಜಮೀರ್ ಅಹಮ್ಮದ್ ಯಾವುದೇ ತಪ್ಪು ಮಾಡಿಲ್ಲ. ಜೆಡಿಎಸ್ ಪಕ್ಷದಲ್ಲಿದ್ದ ಎಲ್ಲರನ್ನೂ ಎಚ್.ಡಿ.ಕುಮಾರಸ್ವಾಮಿ ಹೊರಹಾಕಿದರು. ಈಗ ಅವರೇ ಎಲ್ಲರನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಮಾಗಡಿ ಬಾಲಕೃಷ್ಣ, ಚಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಎಲ್ಲರ ಮೇಲೂ ಅವರಿಗೆ ಕೋಪವಿದೆ. ಜಮೀರ್ ಅಹಮ್ಮದ್ ಯಾವುದೇ ತಪ್ಪು ಮಾಡುವವರಲ್ಲ.
ಹಗರಣ ನಡೆದಿದೆ ಎಂದು ಈಗ ಹೇಳುತ್ತಿರುವವರು ಆವಾಗ ಏನು ಮಾಡುತ್ತಿದ್ದರು? ಹಗರಣ ನಡೆಯುವ ಮುನ್ನ ತಡೆಯಬಹುದಿತ್ತಲ್ಲವೇ? ಎಚ್.ಡಿ.ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ರೀತಿ ಮೊದಲಿನಿಂದಲೂ ಆರೋಪ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.