ಜಿಲ್ಲೆ

ಸಚಿವ ರಾಜೀನಾಮೆ ನೀಡದಂತೆ ಮನವಿ

ಬಳ್ಳಾರಿ: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಕ್ರಮ ಅವ್ಯವಹಾರದಲ್ಲಿ ಸಚಿವ ಬಿ.ನಾಗೇಂದ್ರ ಹಸ್ತಕ್ಷೇಪವಿಲ್ಲ, ಆದ್ದರಿಂದ ರಾಜೀನಾಮೆ ಪಡೆಯಬಾರದೆಂದು ವಾಲ್ಮೀಕಿ, ದಲಿತ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಮುಖಂಡರಿಂದ ನಗರ ಕನಕದುರ್ಗಮ್ಮ ದೇವಸ್ಥಾನದಿಂದ ಡಿಸಿ ಕಚೇರಿಯವರೆಗೆ ಮೌನ ಮೆರವಣಿಗೆ ನಡೆಸಿ ಡಿಸಿ ಪ್ರಶಾಂತ ಕುಮಾರ ಮಿಶ್ರಾ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಮೆರವಣಿಗೆಗೂ ಮುನ್ನ ನಗರ ಶಾಸಕ ನಾರಾ ಭರತರೆಡ್ಡಿ ನೇತೃತ್ವದಲ್ಲಿ ಕಾರ್ಯಕರ್ತರು ಕನಕ ದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಸಾವಿರ ಟೆಂಗಿನಕಾಯಿ ಒಡೆದು ಸಚಿವ ಬಿ. ನಾಗೇಂದ್ರ ಅವರನ್ನು ರಕ್ಷಿಸುವಂತೆ ಪ್ರಾರ್ಥಿಸಿದರು.
ಶಾಸಕ ನಾರಾ ಭರತರೆಡ್ಡಿ ಮಾತನಾಡಿ, ಲೈಂಗಿಕ ಆರೋಪ ಹೊತ್ತಿರುವ ಪ್ರಜ್ವಲ್ ರೇವಣ್ಣ ತನಿಖೆಯನ್ನು ಬೇರೆಡೆ ಸೆಳೆಯಲು ಬಿಜೆಪಿ ಈ ವಿಷಯ ತರುತ್ತಿದ್ದಾರೆ. ಸಚಿವ ಬಿ.ನಾಗೇಂದ್ರ ಅವರ ಮೇಲೆ ವಿನಾಕಾರಣ ವಿರೋಧ ಪಕ್ಷದವರು ರಾಜೀನಾಮೆ ಕೇಳುತ್ತಿದ್ದಾರೆ. ಇದೊಂದು ದುರುದ್ದೇಶದಿಂದ ಕೂಡಿರುವ ಆರೋಪವಾಗಿದೆ. ಸರ್ಕಾರ ಸಚಿವರ ರಾಜೀನಾಮೆ ಪಡೆಯಬಾರದು. ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಪ್ರಕರಣ ಬೇರೆ, ಇದೇ ಬೇರೆ ಎಂದು ಹೇಳಿದರು.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಅವ್ಯವಹಾರ ಘಟನೆಗೆ ಸಚಿವ ಬಿ.ನಾಗೇಂದ್ರ ಅವರಿಗೆ ಯಾವುದೇ ನೇರವಾದ ನಂಟು ಮತ್ತು ಸಂಬಂಧವಿರುವುದಿಲ್ಲ. ಇದಕ್ಕೆಲ್ಲಾ ಇಲಾಖೆ ಮತ್ತು ನಿಗಮದ ಅಧಿಕಾರಿಗಳೇ ನೇರ ಹೊಣೆಗಾರರಾಗಿರುತ್ತಾರೆ. ಘಟನೆಯ ಹಿಂದೆ ಯಾರ ಕೈವಾಡವಿದೆ ಎಂಬುದು ಸಮಗ್ರ ತನಿಖೆಯಿಂದ ಗೊತ್ತಾಗುವವರೆಗೂ ಯಾವುದೇ ಕಾರಣಕ್ಕೂ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಬಾರದು ಎಂದು ರ‌್ಯಾಲಿ ನಡೆಸಿದ ಕಾರ್ಯಕರ್ತರು ಸಿಎಂ ಹಾಗೂ ಡಿಸಿಎಂ ಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗಾದಿಲಿಂಗನಗೌಡ, ಶ್ರಿನಿವಾಸ, ಜಯರಾಮ್, ಮಂಜುಳಾ, ವೆಂಕಟೇಶ ಹೆಗಡೆ ಇದ್ದರು.