ಸಂಸದ ಗೋವಿಂದ ಕಾರಜೋಳ 
ಜಿಲ್ಲೆ

ಸಚಿವ ತಿಮ್ಮಾಪುರ ರೈತರಿಗೆ ಪರಿಹಾರ ಕೊಡೆಸಲಿ

ಬಾಗಲಕೋಟೆ: ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ರ ಮುಳುಗಡೆ ಸಂತ್ರಸ್ತರು ಬಾಗಲಕೋಟೆಯಲ್ಲಿ ಅನಿರ್ದಿಷ್ಟ ಹೋರಾಟ ಮಾಡುತ್ತಿದ್ದಾಗ ಅದನ್ನು ನಿಲ್ಲಿಸಿದ್ದು ಯಾರು? ಹೋರಾಟ ನಿಲ್ಲುವಂತೆ ಮಾಡಿದ ಸಚಿವ ಆರ್.ಬಿ.ತಿಮ್ಮಾಪುರ ಅವರೇ ಈಗ ಸರ್ಕಾರದಿಂದ ರೈತರಿಗೆ ಸೂಕ್ತ ಪರಿಹಾರ ಕೊಡಿಸಲಿ ಎಂದು ಸಂಸದ ಗೋವಿಂದ ಕಾರಜೋಳ ಸಚಿವರಿಗೆ ಚಾಟಿ ಬೀಸಿದರು.

ಬಾಗಲಕೋಟೆಯಲ್ಲಿ ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೃಷ್ಣಾ ಮೇಲ್ದಂಡೆ ಯೋಜನೆ ಹಂತ-೩ಕ್ಕೆ ಮುಳುಗಡೆ ಆಗುವ ೨೦ ಗ್ರಾಮಗಳ ಜನರಿಗೆ ಕಟ್ಟಡಗಳಿಗೆ ಬೆಲೆ ನಿಗದಿ ಪಡಿಸಿ, ಅದಕ್ಕಿಂತ ಶೇ. ೨೦ರಷ್ಟು ಹೆಚ್ಚಿನ ಪರಿಹಾರ ವಿತರಣೆಯನ್ನು ನಮ್ಮ ಸರ್ಕಾರ ಆರಂಭಿಸಿತ್ತು. ಹಾಗೆಯೇ ಮುಳುಗಡೆ ಆಗುವ ರೈತರ ಜಮೀನುಗಳಿಗೆ ಎಕರೆಗೆ ೨೪ ಲಕ್ಷ ರೂ. ಘೋಷಿಸಿ ಅದಕ್ಕೂ ಪರಿಹಾರ ಕೊಡಲು ಚಾಲನೆ ನೀಡಿದ್ದೇವು. ಈಗ ಸರ್ಕಾರ ಅದನ್ನು ಮಾಡುತ್ತಿಲ್ಲ ಎಂದರು.

ನಮ್ಮ ಸರ್ಕಾರ ಹೋಗುವ ಸಮಯದಲ್ಲಿ ಎಸ್‌ಎಲ್‌ಒ ಖಾತೆಯಲ್ಲಿ ೨ ಸಾವಿರ ಕೋಟಿ ರೂ. ಅನುದಾನ ಇಟ್ಟು ಹೋಗಿದ್ದೇವು. ಸಂತ್ರಸ್ತರಿಗೆ ಪರಿಹಾರ ವಿತರಣೆ ನಿಲ್ಲಬಾರದು ಎಂದು. ಈಗ ಅದು ಇಲ್ಲವಾಗಿದೆ. ಮುಳುಗಡೆ ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನಿಗದಿತ ಸಮಯಕ್ಕೆ ವಿತರಿಸಬೇಕು. ಆ ಮೂಲಕ ಸಂತ್ರಸ್ತರು ಜಿವನಕಟ್ಟಿಕೊಳ್ಳಲು ಸರ್ಕಾರ ಸಹಕಾರ ನೀಡಬೇಕು. ಆದರೆ, ಸಂತ್ರಸ್ತರಿಗೆ ನ್ಯಾಯ ಕೊಡೆಸುವುದಾಗಿ ಹೋರಾಟ ನಿಲ್ಲಿಸಿದರಲ್ಲ, ಈಗ ಅವರು ಪರಿಹಾರ ಕೊಡಿಸಬೇಕು ಎಂದು ಸಚಿವ ತಿಮ್ಮಾಪುರ ಅವರಿಗೆ ಚುಚ್ಚಿದರು.