ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ಡಿ. ಸುಧಾಕರ್ ಅವರಿಗೆ ರಾಜ್ಯ ಸರ್ಕಾರ 2024ನೇ ಸಾಲಿನ ಸಹಕಾರ ರತ್ನ ಪ್ರಶಸ್ತಿ ನೀಡಿದೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ, ಶಾಸಕ ಜಿ.ಟಿ. ದೇವೇಗೌಡ ಅವರು ಸುಧಾಕರ್‌ಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ರಾಜ್ಯ ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಕೆ.ಎಸ್. ನವೀನ್ ಇತರರು ಇದ್ದರು.
ಚಿತ್ರದುರ್ಗ ಜಿಲ್ಲೆಯ ಸಹಕಾರ ಕ್ಷೇತ್ರದಲ್ಲಿ ಸುಧಾಕರ್ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. 2003ರಲ್ಲಿ ಚಳ್ಳಕೆರೆ ಹೊಯ್ಸಳ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷರಾಗಿ ಇದುವರೆಗೂ (22ವರ್ಷಗಳಿಂದ)ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. 2004ರಿಂದ 2024 ರವರೆಗೆ 5 ವರ್ಷಗಳ ಅವಧಿಗಳಲ್ಲಿ ನಡೆದ ಚಿತ್ರದುರ್ಗ ಡಿಸಿಸಿ ಬ್ಯಾಂಕಿನ ಚುನಾವಣೆಗಳಲ್ಲಿ ಬ್ಯಾಂಕಿನ ಅಧ್ಯಕ್ಷರಾಗಿ ಕಳೆದ 20 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.
ಸೆಪ್ಟೆಂಬರ್ 2024ರಲ್ಲಿ 2024-2029ರ 5 ವರ್ಷಗಳ ಅವಧಿಗೆ ನಡೆದ ಈ ಬ್ಯಾಂಕಿನ ಚುನಾವಣೆಯಲ್ಲಿ ಮತ್ತೊಂದು ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಸಿಡಿಸಿಸಿ ಬ್ಯಾಂಕಿನ ಪ್ರತಿನಿಧಿಯಾಗಿ ರಾಜ್ಯ ಸಹಕಾರಿ ಅಫೆಕ್ಸ್ ಬ್ಯಾಂಕಿನ ನಿರ್ದೇಶಕರಾಗಿ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.