ಜಿಲ್ಲೆ

ಸಚಿವ ಕೆ.ವೆಂಕಟೇಶ್‌ಗೆ ಅದ್ದೂರಿ ಸ್ವಾಗತ

ಪಿರಿಯಾಪಟ್ಟಣ: ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವರಾದ ಬಳಿಕ ಭಾನುವಾರ ಪಟ್ಟಣಕ್ಕೆ ಆಗಮಿಸಿದ ಕ್ಷೇತ್ರ ಶಾಸಕ ಕೆ.ವೆಂಕಟೇಶ್ ಅವರನ್ನು ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಅದ್ದೂರಿಯಾಗಿ ಬರಮಾಡಿಕೊಂಡರು.


ತಾಲೂಕಿನ ಗಡಿಭಾಗ ಕಂಪಲಾಪುರದ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಚಿವರಾದ ನಂತರ ಇದೇ ಮೊದಲ ಬಾರಿಗೆ ತಾಲೂಕಿಗೆ ಆಗಮಿಸಿದ ವೆಂಕಟೇಶ್ ಅವರನ್ನು ವಿಶೇಷವಾಗಿ ಸ್ವಾಗತಿಸಿದರು.
ಬಳಿಕ ಕಂಪಲಾಪುರದ ಮುಖ್ಯ ರಸ್ತೆಯಿಂದ ತೆರೆದ ವಾಹನದಲ್ಲಿ ವೆಂಕಟೇಶ್ ಅವರನ್ನು ಜಿಲ್ಲಾ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೆಪಿಸಿಸಿ ಸದಸ್ಯ ಹಾಗೂ ವೆಂಕಟೇಶ್ ಅವರ ಪುತ್ರ ನಿತಿನ್ ವೆಂಕಟೇಶ್, ಮತ್ತಿತರ ಮುಖಂಡರೊಂದಿಗೆ ಮೆರವಣಿಗೆಯಲ್ಲಿ ಕರೆತಂದರು. ಪಿರಿಯಾಪಟ್ಟಣಕ್ಕೆ ಬರುವ ಮಾರ್ಗದ ಬಸಲಾಪುರ ಗೇಟ್, ಕಿರನಹಳ್ಳಿ ಗೇಟ್, ಬಾಲಾಬಾಯಿ ತೋಪು, ತಾತನಹಳ್ಳಿ ಗೇಟ್ ಹಾಗೂ ಅಬ್ಬೂರು ಗೇಟ್‌ಗಳ ಬಳಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ವೆಂಕಟೇಶ್ ಅವರಿಗೆ ಪುಷ್ಪಗುಚ್ಛ ನೀಡಿ, ಹಾರ ಹಾಕಿ ಅಭಿನಂದಿಸಿದರು.


ಮಧ್ಯಾಹ್ನ 12.30ರ ವೇಳೆಗೆ ಪಿರಿಯಪಟ್ಟಣಕ್ಕೆ ಆಗಮಿಸಿದ ಸಚಿವರನ್ನು ಪಟ್ಟಣದ ಶ್ರೀಕನ್ನಂಬಾಡಿಯಮ್ಮ ದೇವಾಲಯದ ಬಳಿ ಮಂಗಳವಾದ್ಯದೊಂದಿಗೆ ಬರಮಾಡಿಕೊಂಡ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು, ವೆಂಕಟೇಶ್ ಅವರಿಗೆ ಬೃಹತ್ ಹೂವಿನ ಹಾರ ಹಾಕಿ ಸ್ವಾಗತಿಸಿದರು. ಬಳಿಕ ಕಾರ್ಯಕರ್ತರು ಮತ್ತು ಮುಖಂಡರೊಂದಿಗೆ ಕನ್ನಂಬಾಡಿಯಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿದ ಸಚಿವರು, ಮತ್ತೆ ಪಟ್ಟಣದ ಬಿ.ಎಂ.ರಸ್ತೆಯಲ್ಲಿ ತೆರೆದ ವಾಹನದಲ್ಲಿ ಮೆರವಣಿಗೆ ತೆರಳಿದರು. ದಾರಿಯೂದ್ದಕ್ಕೂ ಜೈಕಾರ ಹಾಕುತ್ತಾ, ಪಟಾಕಿ ಸಿಡಿಸಿ ಅಭಿಮಾನಿಗಳು ಸಂಭ್ರಮಿಸಿದರು.


ಪಟ್ಟಣದ ಬಸವೇಶ್ವರ ವೃತ್ತ, ಸಂತೆಪೇಟೆ ಮುಖ್ಯರಸ್ತೆ ಮೂಲಕ ಸಾಗಿದ ಸಚಿವರು, ಪಟ್ಟಣದ ಅಧಿದೇವತೆ ಶ್ರೀಮಸಣಿಕಮ್ಮ ದೇವಾಲಯಕ್ಕೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ನಂತರ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ, ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ, ಅಭಿನಂದನೆ ಸ್ವೀಕರಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಸಚಿವ ಕೆ.ವೆಂಕಟೇಶ್, ತಾಲೂಕಿನ ಮತದಾರರ ಆಶೀರ್ವಾದದಿಂದ 6ನೇ ಬಾರಿಗೆ ಪಿರಿಯಾಪಟ್ಟಣ ತಾಲೂಕಿನ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಇದು ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಿದೆ. ಪ್ರತಿಯೊಬ್ಬ ಕಾರ್ಯಕರ್ತರು ತಮ್ಮದೇ ಚುನಾವಣೆ ಎಂಬಂತೆ ಪರಿಶ್ರಮಿಸಿ ನನ್ನ ಗೆಲುವಿಗೆ ಕಾರಣಕರ್ತರಾಗಿದ್ದಾರೆ ಎಂದು ಸ್ಮರಿಸಿದರು.
ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಚ್.ಡಿ.ಗಣೇಶ್ ಸೇರಿದಂತೆ ತಾಲೂಕಿನ ಅನೇಕ ಹಿರಿಯ ಮುಖಂಡರು ನನ್ನೊಂದಿಗೆ ಕೈಜೋಡಿಸಿ ಕಾಂಗ್ರೆಸ್ ಗೆಲುವಿಗೆ ಕಾರಣಿಭೂತರಾಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಪಕ್ಷದ ಹಲವು ನಾಯಕರ ಬೆಂಬಲದಿಂದ ಎರಡನೇ ಬಾರಿಗೆ ಸಚಿವರಾಗಿದ್ದೇನೆ. ಪಶು ಸಂಗೋಪನಾ ಮತ್ತು ರೇಷ್ಮೆ ಸಚಿವನಾದ ಬಳಿಕ ನನ್ನ ಜವಾಬ್ದಾರಿ ಹೆಚ್ಚಿದ್ದು ರಾಜ್ಯವಿಡೀ ಸಂಚರಿಸಿ ಇಲಾಖೆಯಲ್ಲಿ ಆಗಬೇಕಿರುವ ಸುಧಾರಣೆಗಳ ಬಗ್ಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.


ಮೈಸೂರು ಜಿಲ್ಲಾ ಕಾಂಗ್ರೆಸ್‌ನ ಗ್ರಾಮಾಂತರ ಘಟಕದ ಅಧ್ಯಕ್ಷ ಡಾ.ಬಿ.ಜೆ.ವಿಜಯ್ ಕುಮಾರ್ ಮಾತನಾಡಿ, ಈ ಹಿಂದಿನ ಬಿಜೆಪಿ ಸರ್ಕಾರದ ದುರಾಡಳಿತದಿಂದ ನೊಂದು ಹೋಗಿದ್ದ ಮತದಾರರು ಕಾಂಗ್ರೆಸ್‌ಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ನಲ್ಲಿ ನೀಡಿದ್ದ ಎಲ್ಲ್ಲ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಮೂಲಕ ನುಡಿದಂತೆ ನಡೆಯುವ ಸರ್ಕಾರ ಎಂಬುದನ್ನು ಸಾಬೀತುಪಡಿಸಿದೆ. ಕೆ.ವೆಂಕಟೇಶ್ ಸಚಿವರಾಗಿರುವುದರಿಂದ ತಾಲೂಕಿನಲ್ಲಿ ಅಭಿವೃದ್ಧಿ ಕೆಲಸಗಳ ಮಹಾಪರ್ವವೇ ಆರಂಭಗೊಳ್ಳಲಿದೆ. ತಾಲೂಕನ್ನು ಅಭಿವೃದ್ಧಿಯ ಪಥದತ್ತ ಕೊಂಡೊಯ್ಯುವುದು ನೂತನ ಸಚಿವರ ಗುರಿ ಎಂದರು.


ತಾಲೂಕು ಕುರುಬ ಸಮಾಜದ ಅಧ್ಯಕ್ಷ ಎಚ್.ಡಿ.ಗಣೇಶ್, ಹಿರಿಯ ವಕೀಲ ಬಿ.ವಿ.ಜವರೇಗೌಡ, ಕೆಪಿಸಿಸಿ ಸದಸ್ಯರಾದ ನಿತಿನ್ ವೆಂಕಟೇಶ್, ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ.ಟಿ.ಸ್ವಾಮಿ, ರಹಮ್ಮತ್ ಜಾನ್ ಬಾಬು, ನಗರ ಘಟಕದ ಅಧ್ಯಕ್ಷ ಎ.ಕೆ.ಗೌಡ, ಪುರಸಭಾ ಸದಸ್ಯರಾದ ಹೆಚ್.ಕೆ.ಮಂಜುನಾಥ್, ರವಿ, ಮಂಜುಳಾ ರಾಜು, ಮುಖಂಡರಾದ ಬಿ.ಜೆ.ಬಸವರಾಜ್, ಕೆ.ಆರ್.ನಿರೂಪಾ, ಬಿ.ವಿ.ಅನಿತಾ, ಎಸ್.ಟಿ.ಸರಸ್ವತಿ, ಪಿ.ಎನ್.ಚಂದ್ರಶೇಖರ್, ಬಿ.ಮುಕೇಶ್ ಕುಮಾರ್, ಪಿ.ಎಸ್.ಹರೀಶ್, ಬಿರ್ಲಾ ಹರೀಶ್, ಪುಟ್ಟಯ್ಯ, ರಾಮಚಂದ್ರ, ಮೋಹನ್ ಮಾಸ್ಟರ್, ಮೆಡಿಕಲ್ ಮಹಾದೇವ್ ಇತರರು ಇದ್ದರು.