ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ವರ್ಷದ ಸಾಧನೆಯನ್ನು ನಗರದ ಮನೆ ಮನೆಗೆ ತಲುಪಿಸಲು ಮುಂದಾದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಗೇ ಜನತೆ ಮೋದಿ ಪರವಾಗಿ ಸಿಹಿ ತಿನ್ನಿಸಿದರು.
ಕೇಂದ್ರದಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ಮೇ 30ಕ್ಕೆ ಒಂದು ವರ್ಷ ಕಳೆದಿದ್ದರಿಂದ ಮೋದಿ ಸಾಧನೆಯನ್ನು ಜನರಿಗೆ ತಲುಪಿಸಲು ಪಕ್ಷದ ಕಾರ್ಯಕರ್ತರೊಂದಿಗೆ ಈಶ್ವರಪ್ಪ ಅಭಿಯಾನ ಕೈಗೊಂಡಿದ್ದರು. ಈ ವೇಳೆ ನಾಗರಿಕರು ಮನೆಯಿಂದ ಸಿಹಿ ತಂದು ಸಚಿವರ ಕೈಗಿಟ್ಟು ಮೋದಿ ಸಾಧನೆಯನ್ನು ಕೊಂಡಾಡಿದ್ದು ವಿಶೇಷವಾಗಿತ್ತು.
ಪಕ್ಷದ ಕಾರ್ಯಕರ್ತರೊಂದಿಗೆ ಮನೆ ಮನೆಗೆ ತೆರಳಿ ‘ವರ್ಷ ಒಂದು ಸಾಧನೆ ನೂರಾರು’ ಶೀರ್ಷಿಕೆಯ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅವರ ಸಾಧನೆ, ಸಿಎಂ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿ ಸಾಧನೆಯನ್ನು ಸಾರುವ ಕರಪತ್ರ ಹಂಚಿದರು.
ಮಲ್ಲೇಶ್ವರ ನಗರದ ಮನೆ ಮನೆಗಳಿಗೆ ತೆರಳಿ ಸಚಿವರು ಭಿತ್ತಿಪತ್ರ ವಿತರಿಸಿದರು. ಈ ಸಂದರ್ಭದಲ್ಲಿ ಹಿರಿಯರ ಕಾಲಿಗೆ ಸಚಿವ ಈಶ್ವರಪ್ಪ ನಮಸ್ಕರಿಸಿ ಆಶೀರ್ವಾದ ಪಡೆದರು.
ಜನಮಾನಸದಲ್ಲಿ ಬೇರೂರಿದ ಮೋದಿ: ಪ್ರಧಾನಿ ಮೋದಿ ಅವರ ಸಾಧನೆ ಜನಮನದಲ್ಲಿ ಆಳವಾಗಿ ಬೇರೂರಿದೆ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಮೋದಿ ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಮೇ 30ಕ್ಕೆ ಒಂದು ವರ್ಷವಾಗಿದೆ. ಈ ಅವಧಿಯಲ್ಲಿ ಮೋದಿ ಸಾಧನೆ ಅಪಾರ. ದೇಶದ ಯುವಕರ ನೇತಾರ, ರೈತರ ಮಿತ್ರ, ದೇಶ ರಕ್ಷಣೆ ಮಾಡಿದವರು, ದೇಶದ ಹಿಂದು-ಮುಸ್ಲಿಂ-ಕ್ರೖೆಸ್ತರನ್ನು ಸಮಾನವಾಗಿ ಕಂಡ ವ್ಯಕ್ತಿಯೆಂದರೆ ಮೋದಿ ಎಂದು ಬಣ್ಣಿಸಿದರು.
ಬಿಜೆಪಿ ನಗರ ಅಧ್ಯಕ್ಷ ಜಗದೀಶ್, ಮುಖಂಡರಾದ ಸಂತೋಷ್ ಬಳ್ಳೆಕೆರೆ ಮತ್ತಿತರರು ಇದ್ದರು.