ಹುಬ್ಬಳ್ಳಿ; ಸರ್ಕಾರದ ವಿನೂತನ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ’ ಕಾರ್ಯಕ್ರಮದ ಅಂಗವಾಗಿ ಕಂದಾಯ ಸಚಿವ ಆರ್. ಅಶೋಕ ಅವರು ತಾಲೂಕಿನ ಛಬ್ಬಿಯಲ್ಲಿ ಮಾರ್ಚ್ 20ರಂದು ಗ್ರಾಮ ವಾಸ್ತವ್ಯ ಕೈಗೊಳ್ಳಲಿದ್ದು, ಅದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಛಬ್ಬಿ ಗ್ರಾಮವನ್ನು ಕಂದಾಯ ಸಚಿವರ ನಿರ್ದೇಶನದ ಮೇರೆಗೆ ವಾಸ್ತವ್ಯಕ್ಕೆ ಆಯ್ಕೆ ಮಾಡಲಾಗಿದೆ. ಗ್ರಾಮದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಸಂಧ್ಯಾ ಸುರಕ್ಷಾ, ಇಂದಿರಾ ಗಾಂಧಿ ವೃದ್ಧಾಪ್ಯ, ವಿಧವಾ ವೇತನ, ಕೃಷಿ ಇಲಾಖೆಯಿಂದ ಪರಿಕರಗಳ ವಿತರಣೆ, ಆರೋಗ್ಯ ಇಲಾಖೆಯಿಂದ ಕನ್ನಡಕ ವಿತರಣೆ, ದಂತಭಾಗ್ಯ, ವಿಕಲಚೇತನರಿಗೆ ಕೃತಕ ಕೈ-ಕಾಲು, ಶ್ರವಣ ಸಾಧನ, ವ್ಹೀಲ್ ಚೇರ್ ವಿತರಿಸಲಾಗುವುದು. ಭೂ ಮಾಪನ ಇಲಾಖೆಯಿಂದ ಪೋಡಿ ಮುಕ್ತ ಗ್ರಾಮದ ಅಭಿಯಾನ ನಡೆಯಲಿದೆ ಎಂದರು.
119 ಅರ್ಜಿ ವಿಲೇವಾರಿ: ಸಚಿವರ ಭೇಟಿ ಹಿನ್ನೆಲೆಯಲ್ಲಿ ಮಾರ್ಚ್ 1ರಿಂದ ಗ್ರಾಮಸ್ಥರ ಅಹವಾಲು ಸ್ವೀಕರಿಸಲಾಗಿದೆ. ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 266 ಅರ್ಜಿಗಳು ಸ್ವೀಕಾರಗೊಂಡಿವೆ. ಇವುಗಳಲ್ಲಿ 119 ಅರ್ಜಿ ವಿಲೇವಾರಿ ಮಾಡಲಾಗಿದೆ. ಕಂದಾಯ ಇಲಾಖೆಗೆ ಸಂಬಂಧಿಸಿದ 48 ಅರ್ಜಿಗಳು ಅದರಲ್ಲಿವೆ ಎಂದರು.
ಗ್ರಾಮಸ್ಥರು ಸಾರಿಗೆ ಸಂಪರ್ಕಕ್ಕಾಗಿ ಸಲ್ಲಿಸಿದ ಅರ್ಜಿಯನ್ನು ವಾಯವ್ಯ ಸಾರಿಗೆ ಇಲಾಖೆಗೆ, ಗ್ರಾಮಕ್ಕೆ ಬೇಕಾದ ಪ್ರೌಢಶಾಲೆ ಬಗ್ಗೆ ಶಿಕ್ಷಣ ಇಲಾಖೆಗೆ ಸೂಚಿಸಲಾಗಿದೆ. ಛಬ್ಬಿ ಕೆರೆಗೆ ಕಾರ್ಖಾನೆಯಿಂದ ತ್ಯಾಜ್ಯ ಸೇರುತ್ತಿರುವ ಬಗ್ಗೆ ಗಮನಕ್ಕೆ ತಂದಿದ್ದಾರೆ. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಿಗೆ ಈ ಕುರಿತು ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇವೆ. ರಾಷ್ಟ್ರೀಯ ಹೆದ್ದಾರಿ ದಾಟಲು ಅನುಕೂಲ ಆಗುವಂತೆ ಸೇತುವೆ ನಿರ್ವಿುಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ತಿಳಿಸಲಾಗಿದೆ ಎಂದರು.
ಸಿದ್ಧತೆ ಜೋರು: ವಿವಿಧ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಸಚಿವರ ಆಗಮನಕ್ಕೆ ಗ್ರಾಮಸ್ಥರು ಕಾಯುತ್ತಿದ್ದಾರೆ. ಬೆಂಗಳೂರಿನಿಂದ ವಿಮಾನದ ಮೂಲಕ ಬೆಳಗಾವಿಗೆ ಬರುವ ಸಚಿವರು ಅಂದು ಬೆಳಗ್ಗೆ 11.30ಕ್ಕೆ ಛಬ್ಬಿಗೆ ಆಗಮಿಸುವರು. ಗ್ರಾಮದ ಸಿದ್ಧಾರೂಢ ಮಠ, ದಲಿತ ಕಾಲನಿಗೆ ಭೇಟಿ ನೀಡಿ ಅಂಬೇಡ್ಕರ್ ಭವನದಲ್ಲಿ ಜನರ ಕುಂದುಕೊರತೆ ಆಲಿಸುವರು. ಸರ್ಕಾರಿ ಸೌಲಭ್ಯಗಳ ವಿತರಣೆ ಕಾರ್ಯಕ್ರಮದ ನಂತರ ಸಂಜೆ ವೇದಿಕೆ ಸಮಾರಂಭ ಜರುಗಲಿವೆ. ರಾತ್ರಿ ಗ್ರಾಮದಲ್ಲಿ ವಾಸ್ತವ್ಯ ಹೂಡುವರು. ರಾಜ್ಯಕ್ಕೆ ಮಾದರಿಯಾಗುವಂತೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕಾರ್ಯಕ್ರಮದ ಯಶಸ್ಸಿಗೆ ತಂತ್ರಾಂಶ ರೂಪಿಸಲಾಗಿದೆ. ಸಲ್ಲಿಕೆಯಾದ ಅರ್ಜಿಗಳನ್ನು ಶೇ.100ರಷ್ಟು ವಿಲೇವಾರಿ ಮಾಡಲಾಗುವುದು. ಪ್ರತಿ ವಾರ ಜಿಲ್ಲೆಯ 6ರಿಂದ 7 ಹಳ್ಳಿಗಳಿಗೆ ಸ್ವತಃ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ. ತಹಸೀಲ್ದಾರರು ತಾಲೂಕು ಮಟ್ಟದಲ್ಲಿ ಪ್ರತಿವಾರ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ. ಒಂದು ವರ್ಷದ ಒಳಗಾಗಿ ಜಿಲ್ಲೆಯ ಎಲ್ಲ ಗ್ರಾಮಗಳಿಗೂ ಭೇಟಿ ನೀಡುವ ಗುರಿ ಇದೆ. ಗ್ರಾಮಲೆಕ್ಕಾಧಿಕಾರಿಗಳು ಮನೆ ಮನೆ ಸರ್ವೆ ಕಾರ್ಯ ಸಹ ಕೈಗೊಂಡಿದ್ದಾರೆ ಎಂದು ಮಾಹಿತಿ ನೀಡಿದರು.
54862 ಲಸಿಕೆ ವಿತರಣೆ: ಧಾರವಾಡ ಜಿಲ್ಲೆಯಲ್ಲಿ ಇದುವರೆಗೆ 54862 ಡೋಸ್ ಕೋವಿಡ್ ಲಸಿಕೆ ವಿತರಣೆ ಮಾಡಲಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಮತ್ತೆ ಎರಡಂಕಿ ದಾಟಿದೆ. ಎರಡನೇ ಅಲೆ ಬಗ್ಗೆ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ 74 ಕಡೆಗಳಲ್ಲಿ ಪ್ರತಿ ದಿನ 10 ಸಾವಿರ ಜನರಿಗೆ ಲಸಿಕೆ ನೀಡುವ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕೋವಿಡ್ ವಿಚಾರದಲ್ಲಿ ಜನರ ನಡವಳಿಕೆ ತೃಪ್ತಿ ತಂದಿಲ್ಲ. ಸಭೆ ಸಮಾರಂಭಗಳಿಗೆ 500ಕ್ಕಿಂತ ಹೆಚ್ಚು ಜನ ಸೇರಬಾರದು. ಮಾಸ್ಕ್ ಹಾಕದೆ ಓಡಾಡುವವರಿಗೆ ಮೂರು ಪಟ್ಟು ದಂಡ ವಿಧಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಬಿಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ವಸತಿ ನಿಲಯ ಸ್ಥಾಪನೆ: ಶೆರೆವಾಡ ಗ್ರಾಮದಲ್ಲಿ ಅಂಬೇಡ್ಕರ್ ವಸತಿ ನಿಲಯಕ್ಕೆ ಕಂದಾಯ ಇಲಾಖೆಯ 6.5 ಎಕರೆ ಜಮೀನು ಮಂಜೂರಾಗಿದೆ. ಸಚಿವರ ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ವಸತಿ ನಿಲಯ ಸ್ಥಾಪನೆಗೆ ಭೂಮಿ ಹಸ್ತಾಂತರಿಸುವರು. 20 ಲಕ್ಷ ರೂ. ವೆಚ್ಚದಲ್ಲಿ ಛಬ್ಬಿ ಗ್ರಾಮದಲ್ಲಿ ನಿರ್ವಿುಸಲಾಗಿರುವ ನೂತನ ನಾಡ ಕಚೇರಿಯನ್ನು ಸಚಿವರು ಲೋಕಾರ್ಪಣೆ ಮಾಡುವರು ಎಂದರು. ನಗರ ತಹಸೀಲ್ದಾರ್ ಶಶಿಧರ ಮಾಡ್ಯಾಳ, ಗ್ರಾಮೀಣ ತಹಸೀಲ್ದಾರ್ ಪ್ರಕಾಶ್ ನಾಶಿ ಗೋಷ್ಠಿಯಲ್ಲಿದ್ದರು.
ಹುಬ್ಬಳ್ಳಿಯಲ್ಲಿ 321 ಕಟ್ಟಡಗಳ ಮಾಲೀಕರಿಗೆ ನೋಟಿಸ್: ಹುಬ್ಬಳ್ಳಿ ಧಾರವಾಡ ಅವಳಿ ನಗರದಲ್ಲಿ ಫುಟ್ಪಾತ್, ನಾಲಾ ಒತ್ತುವರಿ ತೆರವು ಕಾರ್ಯುಚರಣೆ ಮುಂದುವರಿಯಲಿದೆ. ಮಹಾನಗರ ಪಾಲಿಕೆ ಅಧಿಕಾರಿಗಳು ನಿರಂತರವಾಗಿ ಕಾರ್ಯಾಚರಣೆ ಕೈಗೊಳ್ಳುವರು. ರ್ಪಾಂಗ್ ವ್ಯವಸ್ಥೆ ಕಲ್ಪಿಸದೆ ನಿಯಮ ಉಲ್ಲಂಘನೆ ಮಾಡಿರುವ ಹುಬ್ಬಳ್ಳಿಯ 321 ಕಟ್ಟಡಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ನೀಡಲಾಗಿದೆ. ಪಾಲಿಕೆ ಜಾಗ ಲೀಸ್ ಪಡೆದು ಅವಧಿ ಮುಗಿದ ನಂತರವೂ ವ್ಯಾಪಾರ ಮಾಡುತ್ತಿರುವವರಿಗೂ ಸೂಚನೆ ನೀಡಲಾಗಿದೆ. ಶೀಘ್ರದಲ್ಲಿ ತೆರವು ಕಾರ್ಯ ನಡೆಯಲಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದಲ್ಲಿ 94 ಸ್ಥಳಗಳಲ್ಲಿ ರ್ಪಾಂಗ್ ವ್ಯವಸ್ಥೆ ಕಲ್ಪಿಸಲು ಜಾಗಗಳನ್ನು ಗುರುತಿಸಲಾಗಿದೆ. ಪೊಲೀಸ್ ಆಯುಕ್ತರು ಈ ಕುರಿತು ಅಧಿಸೂಚನೆ ಹೊರಡಿಸುವರು. ನೂತನ ರ್ಪಾಂಗ್ ಸ್ಥಳ ಹಾಗೂ ಸಂಚಾರಿ ವೃತ್ತಗಳಲ್ಲಿ ಚಿಹ್ನೆಗಳನ್ನು ಬಣ್ಣದಿಂದ ಗುರುತಿಸಲು 7 ಕೋಟಿ ರೂ. ಪಾಲಿಕೆ ಆಯವ್ಯಯದಲ್ಲಿ ಮೀಸಲಿರಿಸಲಾಗಿದೆ. ಪಾಲಿಕೆ ಜಾಗವನ್ನು ಒತ್ತುವರಿ ಮಾಡಿದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.</