ಜಿಲ್ಲೆ

ಸಚಿವ ಅಮಿತ್ ಷಾ ರಾಜೀನಾಮೆ ಆಗ್ರಹಿಸಿ 7ರಂದು ಮೈಸೂರು ಬಂದ್

ಮೈಸೂರು: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಹೇಳಿಕೆ ನೀಡಿರುವ ಗೃಹ ಸಚಿವ ಅಮಿತ್ ಷಾ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಜ.7ರಂದು ಮೈಸೂರು ಬಂದ್‌ಗೆ ಕರೆ ನೀಡಲಾಗಿದೆ ಎಂದು ಕರ್ನಾಟಕ ದಲಿತ ಚಳವಳಿ ನವ ನಿರ್ಮಾಣ ವೇದಿಕೆಯ ಹರಿಹರ ಆನಂದಸ್ವಾಮಿ ತಿಳಿಸಿದರು.

ಬಂದ್‌ಗೆ ವಾಣಿಜ್ಯೋದ್ಯಮಿಗಳು, ಪ್ರಗತಿಪರರು, ಹೋಟೆಲ್ ಮಾಲೀಕರು, ಕಾರ್ಮಿಕ ಸಂಘಟನೆಗಳು, ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳು ಬೆಂಬಲ ನೀಡಬೇಕೆಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋರಿದರು.

ಅಮಿತ್ ಷಾ ಅವರು ಅಂಬೇಡ್ಕರ್ ಅವರನ್ನು ಅಪಮಾನಿಸಿರುವುದನ್ನು ಖಂಡಿಸಿ ಹಾಗೂ ಅವರು ಕ್ಷಮೆಯಾಚಿಸುವುದರೊಡನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಈ ಹೋರಾಟವನ್ನು ಕೈಗೊಳ್ಳಲಾಗಿದೆ ಎಂದರು.

ಷಾ ಅವರ ನಡವಳಿಕೆ ವಿರುದ್ಧ ರಾಷ್ಟ್ರವ್ಯಾಪಿ ಆಕ್ರೋಶ ಭುಗಿಲೆದ್ದಿದೆ. ಹೀಗಾಗಿ ಮಾನವೀಯ ಆಶಯವನ್ನು ಹೊಂದಿರುವ ಬಹುಸಂಖ್ಯಾತ ಜನಸಾಮಾನ್ಯರ ಆಶಯಕ್ಕೆ ಪೂರಕವಾಗಿ ನಡೆಯುತ್ತಿರುವ ಹೋರಾಟ ಬೆಂಬಲಿಸಿ ಈ ಬಂದ್‌ಗೆ ಕರೆ ನೀಡಲಾಗಿದೆ ಎಂದರು.

ಅಂಬೇಡ್ಕರ್ ಅವರು ರಾಷ್ಟ್ರ ಮತ್ತು ಜಗತ್ತು ಕಂಡ ಅತ್ಯಂತ ಪ್ರಾಜ್ಞ ಮಹನೀಯರಾಗಿದ್ದಾರೆ. ಇಂತಹವರನ್ನು ಜಾತಿ ಕಾರಣದಿಂದಾಗಿ ಅಮಿತ್ ಷಾ ನಿಂದಿಸಿದ್ದು, ಪರಿಶಿಷ್ಟ ಜಾತಿ ಮತ್ತು ವರ್ಗಗಳ ವಿರುದ್ಧದ ದೌರ್ಜನ್ಯ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಬಂಧಿಸಬೇಕು ಎಂದು ಆಗ್ರಹಿಸಿದರು.

ಮುಖಂಡರಾದ ಅಹಿಂದ ಜವರಪ್ಪ, ಸೋಮಯ್ಯ ಮಲೆಯೂರು, ದೇವಗಳ್ಳಿ ಸೋಮಶೇಖರ್, ಮಲ್ಲೇಶ್ ಚುಂಚನಹಳ್ಳಿ, ಹೊರಳವಾಡಿ ನಂಜುಂಡಸ್ವಾಮಿ, ಹರಕುಮಾರ್ ಇತರರಿದ್ದರು.