ಜಿಲ್ಲೆ

ಸಗಣಿ ಎರಚಿ ಗೊರೆ ಹಬ್ಬ ಆಚರಣೆ

ಚಾಮರಾಜನಗರ: ಜಿಲ್ಲೆಯ ಗಡಿಯಲ್ಲಿರುವ, ತಮಿಳುನಾಡಿಗೆ ಸೇರಿದ್ದರೂ ಕನ್ನಡಿಗರೇ ಹೆಚ್ಚಾಗಿ ವಾಸ ಮಾಡುತ್ತಿರುವ ತಾಳವಾಡಿಯ ಗುಮಟಾಪುರದಲ್ಲಿ ಒಬ್ಬರಿಗೊಬ್ಬರು ಸಗಣಿ ಎಚರಿಕೊಂಡು ಗುರುವಾರ ಗೊರೆ ಹಬ್ಬ ಆಚರಣೆ ಮಾಡಿದರು.

ಪ್ರತಿ ವರ್ಷ ದೀಪಾವಳಿಯ ಬಲಿಪಾಡ್ಯಮಿಯ ಮಾರನೇ ದಿನ ಈ ಹಬ್ಬ ಆಚರಣೆ ಮಾಡಲಾಗುತ್ತದೆ. ಕೊಟ್ಟಿಗೆ ಗೊಬ್ಬರವನ್ನು ಒಂದೆಡೆ ಕಲೆ ಹಾಕಿ ಉಂಟೆ ಮಾಡಿ ಗ್ರಾಮಸ್ಥರು ಒಬ್ಬರಿಗೊಬ್ಬರು ಸಗಣಿಯಲ್ಲಿ ಹೊಡೆದಾಡಿಕೊಳ್ಳುತ್ತಾರೆ. ಅಲ್ಲದೆ ಬೈದು, ನಿಂದಿಸಿಕೊಂಡು ಹಬ್ಬ ಆಚರಣೆ ಮಾಡುತ್ತಾರೆ.

ಗುಮಟಾಪುರದಲ್ಲಿ ನೂರಾರು ವರ್ಷಗಳ ಹಿಂದೆ ಗೌಡರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಆಳು ಮೃತಪಟ್ಟ ಹಿನ್ನೆಲೆ ಆತ ಜೋಳಿಗೆಯನ್ನು ಸೆಗಣಿ ತಿಪ್ಪೆಗೆ ಎಸೆಯಲಾಗಿತ್ತಂತೆ. ನಂತರ ತಿಪ್ಪೆ ಇದ್ದ ಮಾರ್ಗದಲ್ಲಿ ಸಾಗಿದ್ದ ಗೌಡ ಎತ್ತಿನಗಾಡಿ ಚಕ್ರಕ್ಕೆ ಜೋಳಿಗೆ ಸಿಲುಕಿತ್ತಂತೆ. ಆಗ ತಿಪ್ಪೆಯೊಳಗಿಂತ ಲಿಂಗರೂಪದ ಕಲ್ಲಿನಿಂದ ರಕ್ತಬರುತ್ತದೆ. ಅಂದು ರಾತ್ರಿ ದೇವರು ಕನಸಿನಲ್ಲಿ ಬಂದು ದೋಷ ಪರಿಹಾರಕ್ಕಾಗಿ ಸೆಗಣಿ ಹಬ್ಬ ಆಚರಣೆ ಮಾಡಬೇಕೆಂದು ಹೇಳಿದ್ದರಿಂದಾಗಿ ಗೊರೆಹಬ್ಬ ತಲೆಮಾರುಗಳಿಂದ ನಡೆದುಬಂದಿದೆ.

ಅಂತೆಯೇ ಗುರುವಾರ ಒಬ್ಬರು ಮತ್ತೊಬ್ಬರಿಗೆ ಸೆಗಣಿ ಎರಚಿ ವಿನೋದ ಪಡುವ ಹಬ್ಬವಾದ ಗೊರೆಹಬ್ಬ ಗ್ರಾಮದಲ್ಲಿ ಸಂಭ್ರಮ ಕಳೆಗಟ್ಟುವಂತೆ ಮಾಡಿತ್ತು. ಗ್ರಾಮದ ಕಾರಪ್ಪ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಕೊಂಡಕ್ಕಾರ(ಚಾಡಿಕೋರ) ಎಂಬ ವೇಷಧಾರಿಯನ್ನು ಕತ್ತೆ ಮೇಲೆ ಕೂರಿಸಿ ಮೆರವಣಿ ನಡೆಸಲಾಯಿತು. ಬೀರೇಶ್ವರ ದೇವಸ್ಥಾನದ ಆವರಣದಲ್ಲಿ ಸೆಗಣಿ ಗಡ್ಡೆ ಬಳಿ ಸೇರಿದ ಜನರು ಪರಸ್ಪರ ಸಗಣಿ ಎರಚಿಕೊಂಡು ಹಬ್ಬ ಮಾಡಿದರು. ಈ ಆಚರಣೆಯಲ್ಲಿ ನೂರಾರು ಯುವಕರು ಸೇರಿದ್ದರು. ಗ್ರಾಮಸ್ಥರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು.